ಬೆಂಗಳೂರು: ಪ್ರವೇಶಾತಿಯಲ್ಲಿನ ಕುಸಿತ ತಡೆದು ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ (ಆರ್‌ಟಿಇ) ತಿದ್ದುಪಡಿ ತರಲಾಗಿದೆ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.
ವಾಸ ಪ್ರದೇಶದ ವ್ಯಾಪ್ತಿಯ ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಅಂತಹ ಕಡೆ ಆರ್‌ಟಿಇ ಅಡಿಯಲ್ಲಿ ಪ್ರವೇಶ ಪಡೆಯಲು ಖಾಸಗಿ ಶಾಲೆಗಳನ್ನು ಗುರುತಿಸುವಂತಿಲ್ಲ ಎಂಬ ಸರ್ಕಾರದ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್, 2012ರಿಂದ ಈಚೆಗೆ ಹಲವು ಸರ್ಕಾರಿ ಶಾಸಲೆಗಳ ಪ್ರವೇಶಾತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಉದ್ದೇಶದಿಂದ ಸರ್ಕಾರ ಈ ತಿದ್ದುಪಡಿ ತಂದಿದೆ. ಅಲ್ಲದೇ ಸರ್ಕಾರಿ ಶಾಲೆಗಳ ಸಬಲೀಕರಣ ಸರ್ಕಾರದ ಮುಖ್ಯ ಗುರಿ. ಅದಕ್ಕಾಗಿಯೇ ರಾಜ್ಯದಲ್ಲಿ ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುವುದಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದಾರೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಆರ್‌ಟಿಇ ಕಾಯ್ದೆಯನ್ನು ಸಮರ್ಪಕ ರೀತಿಯಲ್ಲಿ ಜಾರಿಗೆ ತರುವ ಇಚ್ಛಾಶಕ್ತಿ ಸರ್ಕಾರಕ್ಕೆ ಇದ್ದಂತಿಲ್ಲ. ಸರ್ಕಾರದ ಈ ತಿದ್ದುಪಡಿಯಿಂದ ಬಡವರು ಅನಿವಾರ್ಯವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡಬೇಕಾಗುತ್ತದೆ. ಹಾಗಾದರೆ, ಆರ್‌ಟಿಇ ಕಾಯ್ದೆಯ ಮೂಲ ಆಶಯವೇ ವಿಫಲಗೊಳ್ಳಲಿದೆ ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿತು.ನೆರೆಹೊರೆಯಲ್ಲಿ ಸರ್ಕಾರಿ ಅಥವಾ ಅನುದಾನಿತ ಶಾಲೆಗಳಿದ್ದರೆ ಅಂತಹ ಕಡೆ ಆರ್‌ಟಿಇ ಅಡಿ ಖಾಸಗಿ ಶಾಲೆಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ, ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು-2012ರ ನಿಯಮ4ಕ್ಕೆ ತಿದ್ದುಪಡಿ ತಂದು 2019ರ ಜ.30ರಂದು ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಅದನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.