Advertisement

ಆರ್‌ಟಿಇ ಕಾಯ್ದೆ ನ್ಯೂನತೆ ಸರಿಪಡಿಸಲು ಆಗ್ರಹ

02:48 PM Mar 21, 2017 | Team Udayavani |

ದಾವಣಗೆರೆ: ಉಚಿತ ಕಡ್ಡಾಯ ಶಿಕ್ಷಣ (ಆರ್‌ಟಿಇ) ಕಾಯ್ದೆಯಲ್ಲಿನ ನ್ಯೂನತೆ ಸರಿಪಡಿಸಲು ಒತ್ತಾಯಿಸಿ ಸೋಮವಾರ ಶಾಶ್ವತ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಪದಾಧಿಕಾರಿಗಳು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮಾಗೆ ಮನವಿ ಸಲ್ಲಿಸಿದರು. 

Advertisement

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣಬೇರು ಶಿವಮೂರ್ತಿ ಮಾತನಾಡಿ, ಆಧಾರ್‌ ಕಡ್ಡಾಯದಿಂದ ಆರ್‌ಟಿಇ ತಂತ್ರಾಂಶದಲ್ಲಿ ಸಾಕಷ್ಟು ನ್ಯೂನತೆಗಳಿದ್ದು, ಅವುಗಳ ಬದಲಾವಣೆಗೆ ಮುಂದಾಗಬೇಕು. ಮಗು ಮತ್ತು ಪೋಷಕರ ಆಧಾರ್‌ಕಾರ್ಡ್‌ಲ್ಲಿ ವಿಳಾಸ ಒಂದೇ ಇದ್ದು, ಭಾಷೆ ನ್ಯೂನತೆಯಿಂದ ತಂತ್ರಾಂಶ ಅಂತಹ ಅರ್ಜಿ ಸ್ವೀಕರಿಸುತ್ತಿಲ್ಲ.

ಮಗುವಿನ ಆಧಾರ್‌ಕಾರ್ಡ್‌ ನಲ್ಲಿ ನಿಟುವಳ್ಳಿ ಹೊಸ ಬಡಾವಣೆ ಎಂದು ಇರುವಂತಹದ್ದು ತಂದೆ ಆಧಾರ್‌ಕಾರ್ಡ್‌ನಲ್ಲಿ ನಿಟ್ಟುವಳ್ಳಿ ನ್ಯೂ ಎಕ್ಸ್‌ಟೆನನ್‌ ಎಂದಿದ್ದರೆ ಅರ್ಜಿ ಸ್ವೀಕರಿಸುತ್ತಿಲ್ಲ ಎಂದು ತಿಳಿಸಿದರು. ನಿರ್ದಿಷ್ಟಪಡಿಸಿದ ವಾರ್ಡ್‌ನಲ್ಲಿ ಶಾಲೆ ಇಲ್ಲದಿದ್ದಾಗ ಅಂತಹ ವಾರ್ಡ್‌ನ ಪೋಷಕರು ಪಕ್ಕದ ಬೇರೆ ವಾರ್ಡ್‌ನಲ್ಲಿರುವ ಶಾಲೆಗಳಿಗೆ ಆರ್‌ಟಿಇಗೆ ಅರ್ಜಿ ಸಲ್ಲಿಸಲು ಹೋದಾಗ ತಂತ್ರಾಂಶ ಅರ್ಜಿ ಸ್ವೀಕರಿಸುತ್ತಿಲ್ಲ.

ಗ್ರಾಮೀಣ ಪ್ರದೇಶದಲ್ಲಿರುವ ಒಂದು ಗ್ರಾಮದ ಶಾಲೆಗೆ ಅದೇ ಗ್ರಾಮದ ಮಕ್ಕಳು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ಆದರಿಂದ ಅಕ್ಕಪಕ್ಕದ ಹಳ್ಳಿಗಳಲ್ಲಿ ಅನುದಾನರಹಿತ ಶಾಲೆಗಳಿಲ್ಲದಿದ್ದಲ್ಲಿ ಬಡ ಮಕ್ಕಳು ಆರ್‌ಟಿಇಯಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಇಲಾಖೆ ನಿಗದಿಪಡಿಸಿದ ಸೀಟು ತುಂಬುವುದು ಕಷ್ಟವಾಗುತ್ತದೆ.

ಸೀಟುಗಳು ಖಾಲಿ ಉಳಿಯುವ ಸಾಧ್ಯತೆಯೇ ಹೆಚ್ಚು. ಅಕ್ಕಪಕ್ಕದ ವಾರ್ಡ್‌ ಮತ್ತು ಗ್ರಾಮಗಳಲ್ಲಿರುವ ಶಾಲೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಅರ್ಜಿ ಸಲ್ಲಿಕೆ ತಂತ್ರಾಂಶದಲ್ಲಿ ನ್ಯೂನತೆ ಇರುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆರ್‌ಟಿಇ ಅಡಿ ಸಕಾಲದಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.

Advertisement

ಆದ್ದರಿಂದ ಈಗ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುವ ಮಾ 31ನ್ನು ಏ. 15ರವರೆಗೆ ಮುಂದುವರೆಸಬೇಕು ಎಂದು ಮನವಿ ಮಾಡಿದರು. ಒಂದು ಶಾಲೆಗೆ ನಿಗದಿಪಡಿಸಿದ ಸೀಟು ಭರ್ತಿಯಾಗದೆ ಉಳಿದಲ್ಲಿ ಅಂತಹ ಶಾಲೆಗಳ ಸೀಟುಗಳು ಖಾಲಿ ಉಳಿಯದಂತೆ ಇಲಾಖಾ ವತಿಯಿಂದ ಭರ್ತಿ ಮಾಡುವುದರಿಂದ ಸರ್ಕಾರದ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀತಿ ಸಮರ್ಪಕವಾಗಿ ಜಾರಿಯಾದಂತಾಗುತ್ತದೆ.

ಸರ್ಕಾರ ಆರ್‌ಟಿಇ ವಿದ್ಯಾರ್ಥಿಗಳ ಎಲ್‌ ಕೆಜಿ ಹಾಗೂ 1ನೇ ತರಗತಿ ವಿದ್ಯಾರ್ಥಿಗಳಿಗೆ ಕ್ರಮವಾಗಿ 8 ಸಾವಿರ ಮತ್ತು 16 ಸಾವಿರ ನಿಗದಿಪಡಿಸಿರುವುದು ಕನಿಷ್ಟ ಮೊತ್ತವಾಗಿದೆ. ಎಲ್‌ ಕೆಜಿಗೆ 12 ಹಾಗೂ 1ನೇ ತರಗತಿಗೆ 25 ಸಾವಿರ  ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. 

ಜಿಲ್ಲಾ ಅಧ್ಯಕ್ಷ ತ್ಯಾವಣಗಿ ವೀರಭದ್ರಸ್ವಾಮಿ, ಮಲ್ಲೇಶ್‌ ಶ್ಯಾಗಲೆ, ಎಚ್‌.ಜಿ. ಪ್ರಕಾಶ್‌, ಅಗಡಿ ಮಂಜುನಾಥ್‌, ಕನಕ ರತ್ನ, ಮಲ್ಲಮ್ಮ, ಮಧುಕೇಶ, ಎಸ್‌.ಸಿ. ಶಿವಕುಮಾರ್‌, ಎಸ್‌. ಮಂಜುನಾಥ್‌, ವಕ್ತಾರ್‌ಸಿಂಗ್‌, ಕೆ.ಎಸ್‌. ಮಂಜುನಾಥ್‌, ಮಹಾರುದ್ರಯ್ಯ, ವೀರೇಶ್‌ ಬಿ. ಬಿರಾದಾರ್‌, ಎನ್‌.ಟಿ. ಗಣೇಶ್‌, ನಾಗರಾಜ್‌ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next