ಬಾಗಲಕೋಟೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಗರ ವಾರ್ಷಿಕೋತ್ಸವ ಅಂಗವಾಗಿ ರವಿವಾರ ನಡೆದ ಸ್ವಯಂ ಸೇವಕರ ಪಥ ಸಂಚಲನ, ಇಡೀ ನಗರದ ಜನರ ಮೈ ರೋಮಾಂಚನಗೊಳಿಸಿತು. ಸರಿಯಾಗಿ ಸಂಜೆ 4ಕ್ಕೆ ನಗರದ ಬಸವೇಶ್ವರ ಕಾಲೇಜು ಮೈದಾನದಿಂದ ಎರಡು ತಂಡಗಳಾಗಿ ಆರಂಭಗೊಂಡ ಪಥ ಸಂಚಲನ, ಒಂದು ತಂಡ ಕರವೀರಮಠ, ಶಿರೂರ ಅಗಸಿ, ಕಿಣಕಿ ಕ್ರಾಸ್, ಹುಂಡೇಕಾರ ಗಲ್ಲಿ ಕ್ರಾಸ್, ಚರಂತಿಮಠ, ಮಾರವಾಡಿಗಲ್ಲಿ ಕ್ರಾಸ್, ಜವಳಿ ಚೌಕ, ಶಾರದಾ ಪ್ರಸ್ ಕ್ರಾಸ್, ಹಳಪೇಟ ಕ್ರಾಸ್,ಭಾವಸಾರ ಗಜಾನನ ಚೌಕ, ಕೊಪ್ಪ ದವಾಖಾನೆ, ಶಿವಾಜಿ ವೃತ್ತ, ಹಳೆಯ ಅಂಚೆ ಕಚೇರಿ, ವೆಂಕಟೇಶ್ವರ
ದೇವಸ್ಥಾನ, ವಲ್ಲಭಬಾಯಿ ವೃತ್ತ, ಬಸವೇಶ್ವರ ವೃತ್ತಕ್ಕೆ ಆಗಮಿಸಿತು.
ಗಣ ವೇಷಧಾರಿಗಳ ಇನ್ನೊಂದು ತಂಡ, ಬಸವೇಶ್ವರ ಕಾಲೇಜು ಮೈದಾನದಿಂದ ಸಾಸನೂರ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದುರ್ಗಾ ವಿಹಾರ ಸರ್ಕಲ್, ಶಾಂತಿ ನಗರ ಕ್ರಾಸ್, ಹಳೆಯ ಐಬಿ ಕ್ರಾಸ್, ಹರಣಸಿಕಾರಿ ಗಲ್ಲಿ, ವಾಸವಿ ಚಿತ್ರ ಮಂದಿರ, ದುರ್ಗಾ ನಗರ ಕ್ರಾಸ್, ಶಾರದಾ ಲಾಡ್ಜ, ಹೊಳೆಯ ಆಂಜನೇಯ ದೇವಸ್ಥಾನದ ಮೂಲಕ ಹಾಯ್ದು ಬಸವೇಶ್ವರ ವೃತ್ತ ತಲುಪಿತು. ನೂರಾರು ಗಣವೇಷಧಾರಿಗಳಿದ್ದ ಎರಡೂ ಮಾರ್ಗಗಳಿಂದ ಬಂದ ತಂಡಗಳು, ಬಸವೇಶ್ವರ ವೃತ್ತದಲ್ಲಿ ಸಂಗಮಗೊಂಡವು.
ಇದನ್ನು ನೋಡಲೆಂದೇ ಸಾವಿರಾರು ಜನರು, ಕೈಯಲ್ಲಿ ಹೂವು ಹಿಡಿದು ಸ್ವಾಗತಿಸಲು ಕಾತರದಿಂದ ಕಾದಿದ್ದರು. ಎರಡೂ ತಂಡಗಳು ಸಂಗಮಗೊಂಡ ಕ್ಷಣವನ್ನು ಹಲವರು ಕಣ್ತುಂಬಿಕೊಂಡರು. ಬಳಿಕ ಬಸವೇಶ್ವರ ಮೈದಾನದಲ್ಲಿ ಆಕರ್ಷಕ ಕಸರತ್ತು ಪ್ರದರ್ಶನ ನಡೆಯಿತು. ಬಳಿಕ ಜಲ ಮತ್ತು ಪರಿಸರ ಸಂರಕ್ಷಣೆಯ ಪ್ರಾಂತ ಸಂಯೋಜಕ ಸುರೇಶ ನಿಂಗಪ್ಪನವರ ಮುಖ್ಯ ಭಾಷಣ ಮಾಡಿದರು.
ಯಾವುದೇ ಸಂಘ-ಸಂಸ್ಥೆಗಳು ಆರಂಭಗೊಂಡ ಬಳಿಕ, ಅದನ್ನು ಆರಂಭಿಸಿದವರು ಕಾಲವಾದ ಬಳಿಕ ಶೇ.70ರಷ್ಟು ಅವನತಿ ಕಾಣುತ್ತವೆ. ಆದರೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ನಿತ್ಯವೂ ಬೆಳವಣಿಗೆ ಹೊಂದುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ವಿಶ್ವದ 80 ರಾಷ್ಟ್ರಗಳಲ್ಲಿ ಸಂಘ ಕೆಲಸ ಮಾಡುತ್ತಿದೆ. ಈ ದೇಶಕ್ಕೆ ಸಂಘ ಹಲವಾರು ಕೊಡುಗೆ ನೀಡಿದೆ. ಆದರೆ, ಕೆಲವರು ಸಂಘವನ್ನು ಟೀಕಿಸಿ ಆರೋಪಿಸಿ ಮಾತನಾಡುತ್ತಾರೆ. ಇದಕ್ಕೆ ಸಂಘ ತಲೆ ಕೆಡಿಸಿಕೊಳ್ಳುವುದಿಲ್ಲ. ಆ ರೀತಿ ವಿರೋಧ ಮಾಡುವವರೇ, ಸಂಘದ ನೆರವು ಕೇಳಿದವರಿದ್ದಾರೆ ಎಂದರು.
ಸಂಘ ಅಂದ್ರೆ, ದೇಶದ ರಕ್ಷಣೆ, ಸಂಸ್ಕಾರ. ಸಂಘ ಇಲ್ಲದಿದ್ದರೆ ಈ ದೇಶ ಏನಾಗುತ್ತಿತ್ತು ಎಂಬುದು, ಸ್ವತಃ ವಿರೋಧ ಮಾಡುವವರಿಗೂ ಗೊತ್ತಿದೆ. ಈ ರಾಜ್ಯದ ಮುಖ್ಯಮಂತ್ರಿಯಾದವರು, ಪ್ರವಾಹದ ವೇಳೆ ಜನರ ಸೇವೆಯಲ್ಲಿ ತೊಡಗಿದ್ದ ಸ್ವಯಂ ಸೇವಕರತ್ತ ಬಂದು, ಈ ನಾಡಿನ ಸೇವೆ ಮಾಡುವವರು ನೀವೇ ಎಂದು ಶ್ಲಾಘಿಸಿದ್ದರು. ಇಂತಹ ಹಲವಾರು ಸಮಾಜಮುಖೀ ಕಾರ್ಯವನ್ನು ಸಂಘ ನಿತ್ಯವೂ ಮಾಡುತ್ತಿದೆ ಎಂದು ಹೇಳಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಸಂಘ ಚಾಲಕ ಡಾ|ಸಿ. ಎಸ್. ಪಾಟೀಲ ಉಪಸ್ಥಿತರಿದ್ದರು.
ಪಥ ಸಂಚಲನ ವೀಕ್ಷಿಸಿದ ಗಣ್ಯರು
ಗಣವೇಷಧಾರಿಗಳು ಎರಡು ಮಾರ್ಗದಲ್ಲಿ ಪಥ ಸಂಚಲನದೊಂದಿಗೆ ಬಸವೇಶ್ವರ ವೃತ್ತಕ್ಕೆ ಆಗಮಿಸಿದಾಗ ಹಲವು ಗಣ್ಯರು, ಪಥ ಸಂಚಲನ ಕಣ್ತುಂಬಿಕೊಂಡರು. ಶಾಸಕ ಡಾ|ವೀರಣ್ಣ ಚರಂತಿಮಠ, ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ, ಯುವ ಮುಖಂಡ ಸಂತೋಷ ಹೊಕ್ರಾಣಿ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೊಡ, ಮಾಜಿ ಶಾಸಕ ನಾರಾಯಣಸಾ ಬಾಂಡಗೆ, ಬಸವರಾಜ ಕಟಗೇರಿ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.