ನವದೆಹಲಿ: ದೇಶ ವಿರೋಧಿ ಶಕ್ತಿಗಳಿಂದ ಸುಪ್ರೀಂ ಕೋರ್ಟ್ ಅನ್ನು ಗುರಾಣಿಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರ್‌ಎಸ್‌ಎಸ್ ನಿಯತಕಾಲಿಕ “ಪಾಂಚಜನ್ಯ’ದ ಸಂಪಾದಕೀಯದಲ್ಲಿ ಉಲ್ಲೇಖೀಸಲಾಗಿದೆ.
ದೇಶದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿರುವ ಬಿಬಿಸಿ ಸಾಕ್ಷ್ಯಚಿತ್ರದ ಲಿಂಕ್‌ಗಳ ನಿರ್ಬಂಧಕ್ಕೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್ ನೀಡಿರುವುದನ್ನು ಉಲ್ಲೇಖೀಸಿ ಸಂಪಾದಕೀಯದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
“ಈ ಹಿಂದೆ ಕೂಡ ಮಾನವ ಹಕ್ಕುಗಳ ಹೆಸರಿನಲ್ಲಿ ಉಗ್ರರ ರಕ್ಷಣೆ, ಪರಿಸರ ರಕ್ಷಣೆ ಹೆಸರಿನಲ್ಲಿ ದೇಶದ ಅಭಿವೃದ್ಧಿಗೆ ತೊಡಕು, ಇದೀಗ ಭಾರತದಲ್ಲಿದ್ದುಕೊಂಡೇ ದೇಶದ ವಿರುದ್ಧ ಅಪಪ್ರಚಾರ ಮಾಡಲು ದೇಶ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ,’ ಎಂದು ಟೀಕಿಸಲಾಗಿದೆ.
“ದೇಶದ ಹಿತಾಸಕ್ತಿಗಳನ್ನು ಕಾಪಾಡಲು ಸುಪ್ರೀಂ ಕೋರ್ಟ್ ರಚಿಸಲಾಗಿದೆ. ಆದರೆ ದೇಶ ವಿರೋಧಿ ಶಕ್ತಿಗಳು ತಮ್ಮ ದಾರಿಯನ್ನು ಸುಗಮಗೊಳಿಸಿಕೊಳ್ಳಲು ಅದನ್ನು ಸಾಧನವಾಗಿ ಬಳಕೆ ಮಾಡುತ್ತಿವೆ,’ ಎಂದು ಬೇಸರ ವ್ಯಕ್ತಪಡಿಸಲಾಗಿದೆ.
“ಭಾರತದ ವಿರುದ್ಧ ಅಪಪ್ರಚಾರ ಮಾಡಲು ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದೆ. ಇದೊಂದು ಸುಳ್ಳು ಮತ್ತು ಆಧಾರಹಿತ ಚಿತ್ರವಾಗಿದ್ದು, ಕಾಲ್ಪನಿಕ ಆಧಾರದಲ್ಲಿ ಇದನ್ನು ನಿರ್ಮಿಸಲಾಗಿದೆ,’ ಎಂದು ಪ್ರತಿಪಾದಿಸಲಾಗಿದೆ.