Advertisement

RSS ಪ್ರಭಾವ ನಾಲ್ಕು ದಿಕ್ಕುಗಳಲ್ಲಿ ಹೆಚ್ಚಾಗುತ್ತಿದೆ

10:53 AM Nov 15, 2017 | Team Udayavani |

ಪುಣೆ: ಸಂಘದ ಸಿದ್ಧಾಂತಗಳ ಪ್ರಭಾವವು ನಾಲ್ಕು ದಿಕ್ಕುಗಳಲ್ಲಿ ಹೆಚ್ಚಾಗುತ್ತಿದ್ದು, ಈ ಪ್ರಭಾವದಿಂದ ದೇಶದಲ್ಲಿ ಸಾಮಾಜಿಕ ಬದಲಾವಣೆ ಕಾಣುತ್ತಿದೆ. ಆ ಸಾಮಾಜಿಕ ಬದಲಾವಣೆಯ ವೇಗವನ್ನು  ಇನ್ನಷ್ಟು ಹೆಚ್ಚಿಸಬೇಕಾದ ಆವಶ್ಯಕತೆಯಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಇಲ್ಲಿ ಮನವಿ ಮಾಡಿದ್ದಾರೆ.

Advertisement

ಆರ್‌ಎಸ್‌ಎಸ್‌ ಸಿದ್ಧಾಂತದಿಂದ ಪ್ರೇರಿತವಾಗಿ ಕೆಲಸವನ್ನು ಮಾಡುತ್ತಿರುವ ಮಹಾರಾಷ್ಟ್ರದ ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳ ಕೆಲಸದ ಮೌಲ್ಯಮಾಪನ, ಸಂಘಟನಾತ್ಮಕ ಬೆಳವಣಿಗೆ, ಸೇವಾ ಕಾರ್ಯಗಳ ಸ್ಥಿತಿಗತಿ , ಭವಿಷ್ಯದ ಯೋಜನೆಗಳು ಹಾಗೂ ಇತ್ಯಾದಿ ವಿಷಯಗಳ ಕುರಿತು ಚರ್ಚಿಸಲು ಆಯೋಜಿತ ಸಮನ್ವಯ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವತ್‌ ಮಾತನಾಡುತ್ತಿದ್ದರು.

ಸಂಘದ ಪರ ಸಮಾಜದ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಬೆಳೆಯುತ್ತಿರುವ ಈ ನಿರೀಕ್ಷೆಗಳ ಕಾರಣ ಇಡೀ ಸಂಘಟನೆಯ ಜವಾಬ್ದಾರಿಯೂ ಹೆಚ್ಚಾಗಿದೆ ಎಂದವರು ನುಡಿದಿದ್ದಾರೆ. ನಮ್ಮ ಧರ್ಮ, ಸಂಸ್ಕೃತಿ ಹಾಗೂ ರಾಷ್ಟ್ರೀಯತೆಯ ಬಗ್ಗೆ ಮಕ್ಕಳಲ್ಲಿ ಅರಿವು ಹಾಗೂ ವಿಸ್ವಾಸವನ್ನು ಮೂಡಿಸುವುದು ಪ್ರತಿಯೊಂದು ಹಿಂದೂ ಕುಟುಂಬದ ಮೂಲಭೂತ ಕರ್ತವ್ಯವಾಗಿದೆ ಎಂದು ಸಂಘದ ಸರಸಂಚಾಲಕ ಡಾ| ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.

ಈ  ಸಭೆಯಲ್ಲಿ ರಾಜ್ಯದ ವಿವಿಧ ಸಂಸ್ಥೆಗಳು ಮತ್ತು ಸಂಘಟನೆಗಳ ಪ್ರತಿನಿಧಿಗಳು ಹಾಗೂ ಆರ್‌ಎಸ್‌ಎಸ್‌ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next