Advertisement

ಬಿಜೆಪಿ ಸಂಸದರಿಗೆ ಆರೆಸ್ಸೆಸ್‌ ಕಿವಿಮಾತು

11:31 PM Jun 04, 2019 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಅಲೆ, ಪಕ್ಷದ ವರ್ಚಸ್ಸು ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ತಂದುಕೊಟ್ಟಿದ್ದರೂ ಸಂಸದರು ತಮ್ಮ ನಡವಳಿಕೆ, ಚಾರಿತ್ರ್ಯವನ್ನು ಉತ್ತಮವಾಗಿಟ್ಟುಕೊಂಡು ರಾಜ್ಯದ ಜನರ ಸಮಸ್ಯೆ, ನಿರೀಕ್ಷೆಗಳಿಗೆ ಸ್ಪಂದಿಸುವುದರ ಜತೆಗೆ ಪಕ್ಷದ ಬಲವರ್ಧನೆಗೆ ಮುಂದಾಗಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ರಾಜ್ಯದ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

Advertisement

ಸದಾಶಿವನಗರದ ರಾಷ್ಟ್ರೋತ್ಥಾನ ಯೋಗಾ ಕೇಂದ್ರದಲ್ಲಿ ಮಂಗಳವಾರ ಎರಡು ಪ್ರತ್ಯೇಕ ಸಭೆಗಳನ್ನು ನಡೆಸಿದ ಆರ್‌ಎಸ್‌ಎಸ್‌ ಪ್ರಮುಖರು, ಈ ರೀತಿಯ ಸಲಹೆ ನೀಡಿದ್ದಾರೆ. ಮೊದಲಿಗೆ ಸಂಸದರು ಹಾಗೂ ರಾಜ್ಯದ ಪ್ರಮುಖರೊಂದಿಗೆ ಸಭೆ ನಡೆಸಿದ ಆರ್‌ಎಸ್‌ಎಸ್‌ ಪ್ರಮುಖರು, ನಂತರ ರಾಜ್ಯ ಕೋರ್‌ ಕಮಿಟಿ ಸದಸ್ಯರೊಂದಿಗೂ ಒಂದು ಗಂಟೆ ಕಾಲ ಚರ್ಚಿಸಿ, ಕೆಲ ಸೂಚನೆ ನೀಡಿದ್ದಾರೆ.

ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ಸಿ.ಆರ್‌.ಮುಕುಂದ ಹಾಗೂ ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ವಿಭಾಗದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್‌, ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಇತರರು ಪಾಲ್ಗೊಂಡಿದ್ದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್‌, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್‌ ಅಂಗಡಿ, ಹಿರಿಯ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಬಿ.ಶ್ರೀರಾಮುಲು, ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು.

ಮಧ್ಯಾಹ್ನ 1ರಿಂದ ಸಂಜೆ 5ರವರೆಗೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಸಂಸದರಾದ ರಮೇಶ್‌ ಜಿಗಜಿಣಗಿ, ಅಣ್ಣಾ ಸಾಹೇಬ ಜೊಲ್ಲೆ ಸೇರಿ ಕೆಲವರನ್ನು ಹೊರತುಪಡಿಸಿ ಬಹುತೇಕ ಸಂಸದರು ಉಪಸ್ಥಿತರಿದ್ದರು. ರಾಜ್ಯದ ಜನ ಜಾತಿ, ವರ್ಗ ಮೀರಿ ಬಿಜೆಪಿ ಬೆಂಬಲಿಸಿದ್ದಾರೆ. ಹೀಗಾಗಿ, ಜವಾಬ್ದಾರಿಯಿಂದ ಜನರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಜನರಿಗೆ ನಿರಂತರವಾಗಿ ಲಭ್ಯವಿದ್ದು, ಅವರ ಬೇಕು, ಬೇಡಗಳಿಗೆ ಸ್ಪಂದಿಸಬೇಕು. ಲೋಕಸಭಾ ಚುನಾವಣೆ ಗೆಲ್ಲುವುದು ಮಾತ್ರವಲ್ಲದೇ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸೇರಿ ಇತರ ಪ್ರಮುಖರೊಂದಿಗೆ ಪ್ರತ್ಯೇಕವಾಗಿ ಒಂದು ಗಂಟೆ ಕಾಲ ಸಭೆ ನಡೆಸಿದ ಆರ್‌ಎಸ್‌ಎಸ್‌ ಪ್ರಮುಖರು, ರಾಜ್ಯದ ಜನರ ಸಮಸ್ಯೆಗಳಿಗೆ ಹೇಗೆ ಸ್ಪಂದಿಸಬೇಕು. ಅವರ ನಿರೀಕ್ಷೆಗಳನ್ನು ಹೇಗೆ ತಲುಪಬೇಕು ಎಂಬ ಬಗ್ಗೆ ಸಲಹೆ ನೀಡಿದ್ದಾರೆ. ಜನಪ್ರತಿನಿಧಿಗಳು ನಿರಂತರವಾಗಿ ಜನ ಸಂಪರ್ಕದಲ್ಲಿದ್ದು, ಕಾರ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ನಡೆಸಬೇಕು ಎಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next