Advertisement

ಸಂವಿಧಾನದ ಹೆಸರಲ್ಲಿ ಮತಾಂಧತೆ ಹೆಚ್ಚಳ; ಆರೆಸ್ಸೆಸ್‌ ವಾರ್ಷಿಕ ವರದಿಯಲ್ಲಿ ಉಲ್ಲೇಖ

11:31 PM Mar 12, 2022 | Team Udayavani |

ನವದೆಹಲಿ: “ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯ’ದ ಹೆಸರಲ್ಲಿ ದೇಶಾದ್ಯಂತ ಧಾರ್ಮಿಕ ಮತಾಂಧತೆಯು ತೀವ್ರಗೊಳ್ಳುತ್ತಿದೆ. ನಿರ್ದಿಷ್ಟ ಸಮುದಾಯವೊಂದು ಸರ್ಕಾರಿ ಯಂತ್ರದೊಳಗೆ ಪ್ರವೇಶಿಸಲು ವ್ಯಾಪಕ ಯೋಜನೆಯನ್ನು ಹಾಕಿಕೊಂಡಿದೆ ಎಂದು ಶನಿವಾರ ಬಿಡುಗಡೆಯಾದ ಆರೆಸ್ಸೆಸ್‌ನ 2022ರ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಜತೆಗೆ, ಸಂಘಟಿತ ಶಕ್ತಿಯ ಮೂಲಕ ಈ ಯತ್ನವನ್ನು ವಿಫ‌ಲಗೊಳಿಸಬೇಕಿದೆ ಎಂದೂ ತಿಳಿಸಲಾಗಿದೆ.

ಕೇರಳ, ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಯೇ ದೇಶದ ಹಲವು ಭಾಗಗಳಲ್ಲಿ ಧಾರ್ಮಿಕ ಮತಾಂಧತೆಯು ವ್ಯಾಪಿಸುತ್ತಿರುವುದಕ್ಕೆ ಸಾಕ್ಷಿ ಎಂದೂ ವರದಿ ಹೇಳಿದೆ.

ಕಳೆದ ಒಂದು ವರ್ಷದಲ್ಲಿ ಸಂಘ ಪರಿವಾರ ಮಾಡಿರುವ ಕಾರ್ಯಗಳು ಹಾಗೂ ಭವಿಷ್ಯದ ಯೋಜನೆಗಳ ಕುರಿತು ಪರಾಮರ್ಶೆ ನಡೆಸಲು ಗುಜರಾತ್‌ನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ ಬೈಠಕ್‌ ನಡೆಯುತ್ತಿರುವ ಹೊತ್ತಲ್ಲೇ ಈ ವರದಿ ಬಿಡುಗಡೆಯಾಗಿದೆ.

ಕೋಮು ಉನ್ಮಾದದ ಕ್ರಿಯೆಗಳು,ರ‍್ಯಾಲಿಗಳು, ಪ್ರತಿಭಟನೆಗಳು, ಸಾಮಾಜಿಕ ಶಿಸ್ತಿನ ಉಲ್ಲಂಘನೆ, ಸಂವಿಧಾನ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಸಲಾಗುವ ಸಮಾವೇಶಗಳು, ಕ್ಷುಲ್ಲಕ ವಿಚಾರಗಳನ್ನು ಎತ್ತಿಕೊಂಡು ಹಿಂಸಾಚಾರಕ್ಕೆ ಪ್ರೇರಣೆ ನೀಡುವುದು, ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನದಂತಹ ಕ್ರಮಗಳು ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದೂ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

Advertisement

ಇದೇ ವೇಳೆ, ವರದಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ, ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತಾ ಲೋಪ ಸೇರಿದಂತೆ ಹಲವು ವಿಚಾರಗಳ ಕುರಿತೂ ಪ್ರಸ್ತಾಪಿಸಲಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಸ್ಪರ್ಧೆ ಅಗತ್ಯ. ಆದರೆ ಅದು ಆರೋಗ್ಯಪೂರ್ಣ ಪೈಪೋಟಿಯಾಗಿರಬೇಕು ಎಂದು ಉಲ್ಲೇಖಿಸಲಾಗಿದೆ

ಮತಾಂತರ ತಡೆಗೆ ಮತ್ತಷ್ಟು ಕ್ರಮ ಅಗತ್ಯ
ಈ ವರದಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಪಂಜಾಬ್‌, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಮತಾಂತರ ಪ್ರಕರಣಗಳ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ದೇಶದ ಹಲವು ಭಾಗಗಳಲ್ಲಿ ವ್ಯವಸ್ಥಿತವಾಗಿ ಹಿಂದೂಗಳನ್ನು ಮತಾಂತರ ಮಾಡಲಾಗುತ್ತಿರುವ ಮಾಹಿತಿಯಿದೆ. ಇದು ಇಂದು ನಿನ್ನೆಯ ಸವಾಲಲ್ಲ. ನಮ್ಮ ಸಾಮಾಜಿಕ ಮತ್ತು ಧಾರ್ಮಿಕ ನಾಯಕತ್ವ ಹಾಗೂ ಹಿಂದೂ ಸಮಾಜದ ಕೆಲವು ಸಂಘಟನೆಗಳು ಸ್ವಲ್ಪಪ್ರಮಾಣದಲ್ಲಿ ಎಚ್ಚೆತ್ತಿದ್ದು, ಇಂಥ ಕೃತ್ಯಗಳನ್ನು ತಡೆಯಲು ಪ್ರಯತ್ನ ಪಡುತ್ತಿವೆ. ಈ ವಿಚಾರದಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ಸಮನ್ವಯದಿಂದ ನಾವು ಕಾರ್ಯಪ್ರವೃತ್ತರಾಗಬೇಕಿದೆ ಎಂದಿದೆ ವರದಿ.

ಆಡಳಿತ ಯಂತ್ರಕ್ಕೆ ಲಗ್ಗೆಯಿಡಲು ಸಂಚು
ಸರ್ಕಾರದ ಆಡಳಿತ ಯಂತ್ರದೊಳಕ್ಕೆ ಪ್ರವೇಶಿಸಲು ನಿರ್ದಿಷ್ಟ ಸಮುದಾಯವೊಂದು ವ್ಯಾಪಕ ಸಂಚನ್ನು ರೂಪಿಸಿದೆ. ದೀರ್ಘಾವಧಿಯ ಗುರಿಯನ್ನು ಹಾಕಿಕೊಂಡು ಈ ಸಂಚನ್ನು ರೂಪಿಸಲಾಗಿದೆ. ತಮ್ಮ ಸಂಖ್ಯಾಬಲವನ್ನು ತೋರಿಸಿ, ತಮ್ಮ ವಾದವನ್ನು ಒಪ್ಪಿಕೊಳ್ಳುವಂತೆ ಮಾಡಲು ಯಾವುದೇ ಮಾರ್ಗವನ್ನು ಹಿಡಿಯಲು ಅವರು ಸಿದ್ಧತೆ ನಡೆಸಿದ್ದಾರೆ ಎಂದು ಆರೆಸ್ಸೆಸ್‌ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next