ಹೊಸದಿಲ್ಲಿ: ದೇಶದ ಬಡತನ, ನಿರುದ್ಯೋಗ ಸಮಸ್ಯೆ ಮತ್ತು ಆರ್ಥಿಕ ಅಸಮಾನತೆ ಬಗ್ಗೆ ಆರ್‌ಎಸ್‌ಎಸ್ ಧ್ವನಿ ಎತ್ತಿದೆ. ಉದ್ಯೋಗಿಗಳಾಗುವ ಬದಲು ಉದ್ಯಮಿಗಳಾಗಿ ಇತರರಿಗೆ ಉದ್ಯೋಗ ಕಲ್ಪಿಸುವ ವಾತಾವರಣವನ್ನು ದೇಶದಲ್ಲಿ ನಿರ್ಮಿಸಬೇಕಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಪ್ರತಿ ಪಾದಿಸಿದ್ದಾರೆ.
ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಸ್ವದೇಶಿ ಜಾಗರಣ ಮಂಚ್ ಆಯೋಜಿದ್ದ ವೆಬಿನಾರ್‌ನಲ್ಲಿ ಮಾತನಾಡಿದ ಅವರು, “ದೇಶದಲ್ಲಿ ಬಡತನ ಭೂತದಂತೆ ತಾಂಡವವಾಡುತ್ತಿದೆ. ಇದನ್ನು ನಾವು ಹೊಡೆದೋಡಿಸಬೇಕಿದೆ. ಈಗಲೂ 20 ಕೋಟಿ ಮಂದಿ ಬಡತನ ರೇಖೆಗಿಂತ ಕೆಳಗಿರುವುದು ಶೋಚನೀಯ ಎಂದರು.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.7.6ರಷ್ಟಿದೆ. ಜತೆಗೆ ಆರ್ಥಿಕ ಅರ್ಥಿಕ ಅಸಮಾನತೆಯೂ ಹೆಚ್ಚುತ್ತಿದೆ. ಈ ಬಗ್ಗೆ ವರದಿಯೊಂದರಲ್ಲಿ ಉಲ್ಲೇಖೀಸಲಾಗಿದೆ’ ಎಂದರು.
“ವರದಿಯೊಂದರ ಪ್ರಕಾರ, ಭಾರತದ ಜನಸಂಖ್ಯೆಯ ಶೇ.1ರಷ್ಟು ಜನರು ರಾಷ್ಟ್ರದ ಆದಾಯದ ಐದನೇ ಒಂದರಷ್ಟನ್ನು ಹೊಂದಿದ್ದಾರೆ. ಇನ್ನೊಂದೆಡೆ, ದೇಶದ ಶೇ.50ರಷ್ಟು ಜನರು ಆದಾಯದ ಶೇ.13ರಷ್ಟು ಮಾತ್ರ ಹೊಂದಿದ್ದಾರೆ,’ ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದರು.