Advertisement

ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್‌ ಭಾಗ್ವತ್

02:30 PM Dec 20, 2024 | Team Udayavani |

ನವದೆಹಲಿ: ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ ರಾಮಮಂದಿರದಂತಹ ವಿವಾದಗಳನ್ನು ಕೆದಕುವ ಪ್ರಚೋದನಕಾರಿ ಹಿಂದೂ ಮುಖಂಡರ ವಿರುದ್ಧ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವರಿಷ್ಠ ಮೋಹನ್‌ ಭಾಗ್ವತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಬಹು ಜನಾಂಗದ ಅಸ್ಮಿತೆ ಮತ್ತು ಸೌಹಾರ್ದತೆಗೆ ಭಾರತ ಮಾದರಿಯಾಗಬೇಕಿದೆ ಎಂದು ಭಾಗ್ವತ್‌ ಈ ಸಂದರ್ಭದಲ್ಲಿ ಹೇಳಿದರು. ಭಾರತದಲ್ಲಿನ ಬಹುತ್ವ ಸಮಾಜದ ಕುರಿತು ಗಮನಸೆಳೆದ ಮೋಹನ್‌ ಭಾಗ್ವತ್‌ ಅವರು, ಸ್ವಾಮಿ ರಾಮಕೃಷ್ಣ ಆಶ್ರಮದಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸುತ್ತಾರೆ. ನಾವು ಹಿಂದೂಗಳಾಗಿದ್ದರಿಂದ ಮಾತ್ರ ಇದನ್ನು ಮಾಡಬಹುದಾಗಿದೆ ಎಂದರು.

“ನಾವು ದೀರ್ಘ ಕಾಲದಿಂದ ಸೌಹಾರ್ದತೆಯಿಂದ ಬದುಕಿದವರು. ಒಂದು ವೇಳೆ ನಾವು ಜಗತ್ತಿಗೆ ಸೌಹಾರ್ದತೆಯ ಕೊಡುಗೆಯನ್ನು ರವಾನಿಸಬೇಕಿದ್ದರೆ, ನಾವು ಮೊದಲು ಅದನ್ನು ಅನುಸರಿಸಬೇಕು ಎಂದು” ಭಾಗ್ವತ್‌ ಸಲಹೆ ನೀಡಿದ್ದಾರೆ.

“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ನಂತರ ದೇಶದ ವಿವಿಧ ಭಾಗಗಳಲ್ಲಿ ಇಂತಹದ್ದೇ ವಿವಾದಗಳನ್ನು ಕೆದಕುವ ಮೂಲಕ ತಾವು ಹಿಂದೂ ಮುಖಂಡರಾಗಬಹುದು ಎಂದು ಕೆಲವು ಜನರು ಭಾವಿಸಿಕೊಂಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು “ ಆರ್‌ ಎಸ್‌ ಎಸ್‌ ಮುಖ್ಯಸ್ಥ ಮೋಹನ್‌ ಭಾಗ್ವತ್‌ ತಿಳಿಸಿರುವುದಾಗಿ ಪಿಟಿಐ ನ್ಯೂಸ್‌ ಏಜೆನ್ಸಿ ವರದಿ ಮಾಡಿದೆ.

“ಯಾವುದೇ ರಾಜಕೀಯ ಪ್ರೇರಣೆಗೆ ಒಳಗಾಗದೇ ಸಮಸ್ತ ಹಿಂದೂಗಳ ನಂಬಿಕೆಯ ಪ್ರತೀಕವಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ” ಎಂದು ಭಾಗ್ವತ್‌ ಹೇಳಿದರು.

Advertisement

ಯಾವುದೇ ಮಾಧ್ಯಮದ ಹೆಸರನ್ನು ಉಲ್ಲೇಖಿಸದೇ ಮಾತನಾಡಿದ ಭಾಗ್ವತ್‌, ಪ್ರತಿದಿನ ಹೊಸ ವಿವಾದದ ವರದಿಯಾಗುತ್ತದೆ. ಇದನ್ನು ಹೇಗೆ ಒಪ್ಪಿಕೊಳ್ಳಲು ಸಾಧ್ಯ? ಇದು ಯಾವುದೇ ಕಾರಣಕ್ಕೂ ಮುಂದುವರಿಯಬಾರದು. ನಾವೆಲ್ಲರೂ ಒಟ್ಟಿಗೆ ಬದುಕುತ್ತಿದ್ದೇವೆ ಎಂಬುದನ್ನು ಭಾರತ ತೋರಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ಪುಣೆಯಲ್ಲಿ ನಡೆದ ವಿಶ್ವಗುರು ಭಾರತ್‌ ವಿಷಯದ ಕುರಿತು ಉಪನ್ಯಾಸ ನೀಡಿದ ಭಾಗ್ವತ್‌, ಭಾರತೀಯರು ಈ ಹಿಂದೆ ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕಾಗಿದೆ. ಅಲ್ಲದೇ ನಾವೆಲ್ಲ ಸೌಹಾರ್ದತೆಯಿಂದ ಬಾಳುವ ಮೂಲಕ ನಮ್ಮ ದೇಶವನ್ನು ಜಗತ್ತಿಗೆ ಮಾದರಿ ರಾಷ್ಟ್ರವನ್ನಾಗಿ ಮಾಡಬೇಕಾದ ಹೊಣೆಗಾರಿಕೆ ಇರುವುದಾಗಿ ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next