ಬೆಂಗಳೂರು: ಜಗತ್ತನ್ನು ಜ್ಞಾನದ ಬೆಳಕಿನತ್ತ ಕೊಂಡೊಯ್ಯಲು ಸಮರ್ಥವಾಗಿರುವ ಭಾರತಕ್ಕೆ ಅಡ್ಡಿಯಾಗಿರುವ ವಿಚ್ಛಿದ್ರಕಾರಿ ಶಕ್ತಿಗಳಿಂದ ನಾವು ಎಚ್ಚರಿಕೆಯಿಂದ ಇರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ್ ಡಾ| ಮೋಹನ್ ಭಾಗವತ್ ಕರೆ ನೀಡಿದರು.
ಬೆಂಗಳೂರಿನ ಬಸವನಗುಡಿಯಲ್ಲಿ ರುವ ವಾಸವಿ ಸಭಾಂಗಣದಲ್ಲಿ ಸಮರ್ಥ ಭಾರತ ವತಿಯಿಂದ ಆಯೋಜಿಸಿದ್ದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾರತವನ್ನು ಸ್ವತಂತ್ರಗೊಳಿಸಲು ನಮ್ಮ ಪೂರ್ವಿಕರು 1857ರಿಂದಲೂ ಹೋರಾಡಿದ್ದಾರೆ. 90 ವರ್ಷಗಳ ಹೋರಾಟದ ಅನಂತರ 1947ರ ಆ. 15ರಂದು ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಎಂಬುದೊಂದು ನಿರಂತರ ಪ್ರಕ್ರಿಯೆ ಎಂದು ವ್ಯಾಖ್ಯಾನಿಸಿದರು.
ಭಾರತ ಎನ್ನುವ ಶಬ್ದದಲ್ಲಿರುವ ಭಾ ಅಕ್ಷರವು ಬೆಳಕನ್ನು ಸೂಚಿಸುತ್ತದೆ. ನಾವು ಸೂರ್ಯನನ್ನು ಆರಾಧಿಸುವವರಾದ್ದರಿಂದ ಇದನ್ನು ಭಾರತ ಎಂದು ಕರೆಯಲಾಗುತ್ತದೆ. ಸ್ವಾತಂತ್ರ್ಯ ದಿನದಂದು ಸೂರ್ಯನ ಆರಾಧನೆ ಮಾಡುವುದು ಅತ್ಯಂತ ಅರ್ಥಪೂರ್ಣ ಆಚರಣೆ. ಜಗತ್ತನ್ನು ಬೆಳಗುವುದಕ್ಕಾಗಿ ಭಾರತವು ಸ್ವತಂತ್ರವಾಯಿತು. ಈ ದೇಶದಲ್ಲಿ ಹುಟ್ಟಿದ ಮಾನವರು ತಮ್ಮ ನಡಾವಳಿ ಮೂಲಕ ಇಡೀ ಜಗತ್ತಿನ ಸರ್ವ ಮಾನವರಿಗೂ ಶಿಕ್ಷಣವನ್ನು ನೀಡಬಲ್ಲರು. ಇದು ಸ್ವತಂತ್ರ ಶಬ್ದದ ನಿಜವಾದ ಅರ್ಥ. ಈ ನಿಜ ಅರ್ಥದಲ್ಲಿ ಎಲ್ಲರೂ ಬದುಕಬೇಕು ಎಂದರು.
ಆರೆಸ್ಸೆಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಉಪಸ್ಥಿತರಿದ್ದರು. ಯೋಗ ವಿಜ್ಞಾನಿ ಡಾ| ಎಸ್.ಎನ್. ಓಂಕಾರ್ ಅವರು ಸೂರ್ಯ ನಮಸ್ಕಾರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.