ಬೆಂಗಳೂರು: ಬಿಜೆಪಿ ನಾಯಕರ ಬಹಿರಂಗ ವಾಕ್ಸಮರದ ಕುರಿತು ಕಾಂಗ್ರೆಸ್ ಟ್ವೀಟ್ ಮೂಲಕ ಲೇವಡಿ ಮಾಡಿದ್ದು, ಆರ್ ಎಸ್ ಎಸ್ ನವರ ಲಾಠಿ ಇತಿಹಾಸದಲ್ಲಿ ಮೊದಲ ಬಾರಿಗೆ ಉಪಯೋಗಕ್ಕೆ ಬರಲಿದೆ ಎಂದು ಟೀಕಿಸಲಾಗಿದೆ.
ಟ್ವೀಟ್ ಮಾಡಿರುವ ಕೆಪಿಸಿಸಿ ”ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ ಎಸ್ ಎಸ್ ನವರ ಲಾಠಿ ಉಪಯೋಗಕ್ಕೆ ಬರಲಿದೆ,ಸದ್ಯದ ಸ್ಥಿತಿಯಲ್ಲಿ ಬಿಜೆಪಿಗರ ಕೈಗೆ ಕೊಟ್ಟರೆ ಬಡಿದಾಡಿಕೊಳ್ಳಲು ಬಳಸುತ್ತಾರೆ. ಆ ನಂತರ ಬದುಕುಳಿದವರಿಗೆ ಅಧ್ಯಕ್ಷ, ವಿಪಕ್ಷ ನಾಯಕನ ಸ್ಥಾನ ಕೊಟ್ಟು ಕೂರಿಸಬಹುದು,ಆರ್ ಎಸ್ ಎಸ್ ನಾಯಕರಿಗೆ ಬಿಜೆಪಿಯ ಗೊಂದಲ ಬಗೆಹರಿಸಲು ಉತ್ತಮ ಐಡಿಯಾವನ್ನು ಕಾಂಗ್ರೆಸ್ ಕಡೆಯಿಂದ ಫ್ರಿಯಾಗಿ ನೀಡುತ್ತಿದ್ದೇವೆ!” ಎಂದು ವ್ಯಂಗ್ಯವಾಗಿ ಬರೆಯಲಾಗಿದೆ.
ಇನ್ನೊಂದು ಟ್ವೀಟ್ ನಲ್ಲಿ ”ಬಿಜೆಪಿಯ ಸೋಲಿನ ಆತ್ಮಾವಲೋಕನದ ಫೈನಲ್ ರಿಸಲ್ಟ್ ಬರಲೇ ಇಲ್ಲ!. ಒಬ್ಬೊಬ್ಬರದ್ದೂ ಒಂದೊಂದು ಅವಲೋಕನ,ಅಧ್ಯಕ್ಷರಿಂದ ಸೋಲಾಯ್ತು, ವಲಸಿಗರಿಂದ ಸೋಲಾಯ್ತು, ಅಡ್ಜಸ್ಟ್ಮೆಂಟ್ ನಿಂದ ಸೋಲಾಯ್ತು, ಬಡವರ ಅಕ್ಕಿ ಕಿತ್ತುಕೊಂಡು ಸೋಲಾಯ್ತು, ಮೋದಿ ಬೀದಿ ಸುತ್ತಿದ್ದಕ್ಕೆ ಸೋಲಾಯ್ತು, ಗುಜರಾತ್ ಮಾಡೆಲ್ ನಿಂದ ಸೋಲಾಯ್ತು, ಪಕ್ಷದ್ರೋಹಿಗಳಿಂದ ಸೋಲಾಯ್ತು, ಅಕಸ್ಮಾತ್ ಗೆಲುವಾಗಿದ್ದಿದ್ದರೆ ಕ್ರೆಡಿಟ್ ಸಿಂಪಲ್ ಆಗಿರುತ್ತಿದ್ದವು,ಮೋದಿಯಿಂದ ಗೆಲುವಾಯ್ತು, ಜೋಶಿ, ಸಂತೋಷರಿಂದ ಗೆಲುವಾಯ್ತು!. ಅಂತೂ ಇಂತೂ ಬಿಜೆಪಿಯ ಆತ್ಮಾವಲೋಕನದಲ್ಲಿ ಹಲವು ಸತ್ಯಗಳು ಹೊರಬಂದಿವೆ, ಇನ್ನೂ ಹಲವು ಹೊರಬಾರದೆ ಒದ್ದಾಡುತ್ತಿವೆ!” ಎಂದು ಲೇವಡಿ ಮಾಡಲಾಗಿದೆ.
”ರಾಜ್ಯಾಧ್ಯಕ್ಷರಿಂದಲೇ ಬಿಜೆಪಿಗೆ ಸೋಲಾಗಿದ್ದು ಎಂದು ರೇಣುಕಾಚಾರ್ಯ ಹೇಳಿದ್ದಾರೆ.ನಳಿನ್ ಕುಮಾರ್ ಕಟೀಲ್ ಅವರು ಈ ಆರೋಪ ಕೇಳಿಯೂ ಸುಮ್ಮನಿರುವುದೇಕೆ?ನನ್ನದೇನೂ ತಪ್ಪಿಲ್ಲ,ಶಾಡೋ ಅಧ್ಯಕ್ಷರಾದ ಜೋಶಿ, ಸಂತೋಷ್ ಅವರೇ ಸೋಲಿಗೆ ಹೊಣೆ ಎಂದು ಘೋಷಿಸಿಬಿಡಲಿ!. ಸೋಲಿಗೆ ಸರದಾರರಾದ ಜೋಶಿ, ಸಂತೋಷ್ ಅವರುಗಳ ಹೆಸರೆತ್ತಲು ಬಿಜೆಪಿಗರು ಭಯಪಡುತ್ತಿರುವುದೇಕೆ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬಿಜೆಪಿಯಲ್ಲಿ ಚುನಾವಣ ಹೀನಾಯ ಸೋಲಿನ ಬಳಿಕ ದಿನಕ್ಕೊಬ್ಬರಂತೆ ನಾಯಕರು ಬಹಿರಂಗ ಟೀಕೆ ಮಾಡಿಕೊಂಡು ಪಕ್ಷದೊಳಗೆ ಅಸಮಧಾನ ಸ್ಪೋಟಗೊಂಡು ವಾಕ್ಸಮರ ತಾರಕಕ್ಕೇರುತ್ತಿದೆ. ಈ ನಡುವೆ ಬಿಜೆಪಿ ವಿಪಕ್ಷ ನಾಯಕ ಮತ್ತು ಹೊಸ ರಾಜ್ಯಾಧ್ಯಕ್ಷರ ನೇಮಕ ಮಾಡಲು ಇನ್ನೂ ವಿಳಂಬ ಧೋರಣೆ ತೋರುತ್ತಿದೆ.