ಧಾರವಾಡ: ಇಂದಿನಿಂದ ಮೂರು ದಿನಗಳ ಕಾಲ (ಅ.28, 29 ಮತ್ತು 30ರಂದು) ಹೊರವಲಯದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿ ಬೈಠಕ್ ಗೆ ಇಂದು ಚಾಲನೆ ಲಭಿಸಿದೆ.
ಆರ್ ಎಸ್ಎಸ್ ನ ಸರಸಂಘ ಚಾಲಕ ಡಾ. ಮೋಹನ್ ಭಾಗವತ್ ಮತ್ತು ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಅವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಬೈಠಕ್ ಗೆ ಚಾಲನೆ ನೀಡಿದರು.
ಬೈಠಕ್ ಹಿನ್ನೆಲೆಯಲ್ಲಿ ಸುಂದರ ವೇದಿಕೆ ಸಜ್ಜುಗೊಳಿಸಿದ್ದು, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ, ಕನಕ-ಪುರಂದರ, ಸೇರಿದಂತೆ ಕರ್ನಾಟಕದ ಮಹಾನ್ ಚೇತನಗಳ ಭಾವಚಿತ್ರದ ಫಲಕ ಅಳವಡಿಸಲಾಗಿದೆ.
ಇದನ್ನೂ ಓದಿ:ಕಾಲೇಜಿನಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ವಿರೋಧಿಸಿದ್ದ ವಿದ್ಯಾರ್ಥಿನಿಗೆ ಜೀವ ಬೆದರಿಕೆ
ರಾಷ್ಟೊತ್ಥಾನ ವಿದ್ಯಾಕೇಂದ್ರ ಮತ್ತು ಸುತ್ತಲಿನ ಪ್ರದೇಶದ ಪ್ರಮುಖ ರಸ್ತೆಗಳು, ವೃತ್ತ ಗಳಲ್ಲಿ ಭಗಾಧ್ವಜಗಳು ಹಾರಾಟ ಆರಂಭಿಸಿದ್ದು, ಕೇಸರಿ ಬಣ್ಣದ ಬಾವುಟ ಗಳಿಂದ ಅಲ್ಲಲ್ಲಿ ಅಲಂಕರಿಸಲಾಗಿದೆ.
ಅಖಿಲ ಭಾರತೀಯ, ಕ್ಷತ್ರೀಯ ಮತ್ತು ಪ್ರಾಂತ ಸ್ತರದ ಕಾರ್ಯಕರ್ತರು ಈ ಬೈಠಕ್ ನಲ್ಲಿ ಭಾಗವಹಿಸಿದ್ದು, ದೇಶಾದ್ಯಂತ ಸುಮಾರು 350 ಪ್ರತಿನಿಧಿಗಳು ಈ ಬೈಠಕ್ ನಲ್ಲಿ ಉಪಸ್ಥಿತರಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಪ್ರತಿತಂತ್ರ, ಬಿಜೆಪಿ ಸರ್ಕಾರದಲ್ಲಿನ ಜನಪ್ರಿಯ ಯೋಜನೆಗಳ ಜಾರಿ, ಸ್ವಾತಂತ್ರ್ಯ ಅಮೃತ ಮಹೋತ್ಸವ ಕುರಿತು ಇನ್ನಷ್ಟು ಕಾರ್ಯಕ್ರಮ ಗಳ ರಚನೆ ಸೇರಿದಂತೆ, ಕರ್ನಾಟಕದಲ್ಲಿ ಬಿಜೆಪಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಇಲ್ಲಿ ಕಾರ್ಯತಂತ್ರ ರಚನೆಯಾಗಲಿದೆ ಎನ್ನಲಾಗಿದೆ.