ಹುಬ್ಬಳ್ಳಿ: ನಗರದ ರೈಲ್ವೆ ನಿಲ್ದಾಣ ಹಾಗೂ ಯಾರ್ಡ್‌ನಲ್ಲಿ ಹೆಚ್ಚಿನ ಭದ್ರತೆ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ವಿಶೇಷ ಸುರಕ್ಷಾ ಬಲದ (ಆರ್‌ಎಸ್‌ಪಿಎಫ್) ಕಂಪನಿಯೊಂದು ಹುಬ್ಬಳ್ಳಿಗೆ ಆಗಮಿಸಿದೆ.
ರೈಲ್ವೆ ನಿಲ್ದಾಣ ಹಾಗೂ ಆವರಣಗಳಲ್ಲಿ ಅಹಿತಕರ ಘಟನೆಗಳು, ಅವಘಡಗಳನ್ನು ತಡೆಗಟ್ಟಲು ಹಾಗೂ ಈ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಪ್ರಯಾಣಿಕರ ಸುರಕ್ಷತೆ ಹಾಗೂ ನಿಲ್ದಾಣ ಮತ್ತು ಯಾರ್ಡ್‌ನಲ್ಲಿಹೆಚ್ಚಿನ ಭದ್ರತೆ ದೃಷ್ಟಿಯಿಂದ ಆರ್‌ಎಸ್‌ಪಿಎಫ್‌ನ ಅಂದಾಜು 98 ಜನರುಳ್ಳ ಒಂದು ಕಂಪನಿಯು ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗಕ್ಕೆ ಆಗಮಿಸಿದೆ. ಈ ಕಂಪನಿಯು ಮಂಗಳವಾರ ರಾತ್ರಿಯೇ ನಗರಕ್ಕೆ ಆಗಮಿಸಿದ್ದು, ಬುಧವಾರದಿಂದ ಕರ್ತವ್ಯದಲ್ಲಿ ತೊಡಗಿದೆ.
ಈ ವಿಶೇಷ ಪಡೆಯು ರೈಲ್ವೆ ನಿಲ್ದಾಣ ಮತ್ತು ಯಾರ್ಡ್ ಹಾಗೂ ರಾತ್ರಿ ಸಂದರ್ಭದಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಮುಖ 10 ರೈಲುಗಳಲ್ಲಿ ಭದ್ರತೆ ಕೈಗೊಳ್ಳಲಿದೆ. ಈ ವಿಶೇಷ ಪಡೆಯನ್ನು ಭದ್ರತೆಗಾಗಿ ರೈಲ್ವೆ ನಿಲ್ದಾಣದ ಪ್ರವೇಶ ದ್ವಾರ, ಪ್ಲಾಟ್‌ಫಾರ್ಮ್ಗಳು, ಯಾರ್ಡ್, ಗದಗ ಮತ್ತು ಧಾರವಾಡ ಎಂಡ್ ಕಡೆಗೆ ಪೆಟ್ರೋಲಿಂಗ್ ಹಾಗೂ ಟ್ರ್ಯಾಕ್ ಪೆಟ್ರೋಲಿಂಗ್ ಗೆ ನಿಯೋಜಿಸಲಾಗಿದೆ.
ನಿಲ್ದಾಣದ ಎಲ್ಲೆಡೆಯ ಪಾಯಿಂಟ್ಸ್‌ಗಳಲ್ಲಿ ಭದ್ರತೆ ಒದಗಿಸಲಾಗಿದೆ. ಈ ವಿಶೇಷ ಪಡೆಯು ಮೀಸಲು ಬಲವಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಭದ್ರತೆ ಮತ್ತು ಸುರಕ್ಷತೆ ಕೈಗೊಳ್ಳುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಲಿದೆ. ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ಸದ್ಯ ಈ ವಿಶೇಷ ಪಡೆಯನ್ನು ಎರಡು ತಿಂಗಳ ಮಟ್ಟಿಗೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಕರೆಯಿಸಲಾಗಿದೆ. ಈ ಪಡೆಯು ಕೆಎಸ್‌ಆರ್‌ಪಿ ರೀತಿ ತುರ್ತು ಪರಿಸ್ಥಿತಿಯಲ್ಲಿ ಇಲಾಖೆಯ ಇತರೆಡೆಯ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಿಲ್ದಾಣದಲ್ಲಿ ಅನುಮಾನಸ್ಪದ ವಸ್ತುಸ್ಫೋಟ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಅಕ್ಟೋಬರ್ 21ರಂದು ಅನುಮಾನಸ್ಪದ ವಸ್ತುವೊಂದು ಸ್ಫೋಟಗೊಂಡು ಆತಂಕ ಸೃಷ್ಟಿಸಿತ್ತು. ಈ ವಸ್ತುವನ್ನು ವಿಜಯವಾಡ-ಹುಬ್ಬಳ್ಳಿ ಅಮರಾವತಿ ಎಕ್ಸ್‌ಪ್ರೆಸ್‌ನ ಬೋಗಿಯಲ್ಲಿ ಇಡಲಾಗಿತ್ತು. ಅದನ್ನು ತಪಾಸಣೆ ಮಾಡುವಾಗ ಸ್ಫೋಟಗೊಂಡು ವೆಂಡರ್‌ನೊಬ್ಬ ಗಂಭೀರ ಗಾಯಗೊಂಡಿದ್ದ, ರೈಲ್ವೆ ಸ್ಟೇಶನ್ ಮಾಸ್ತರ್ ಅವರ ಕಚೇರಿಗೆ ಅಳವಡಿಸಿದ್ದ ಗಾಜು ಪುಡಿ ಪುಡಿಯಾಗಿದ್ದನ್ನು ಸ್ಮರಿಸಬಹುದು. ಈ ಸ್ಫೋಟ ಘಟನೆ ಕುರಿತು ಸ್ಥಳೀಯ ರೈಲ್ವೆ ಠಾಣೆ ಪೊಲೀಸರಿಂದ ತನಿಖೆ ನಡೆಯುತ್ತಲೇ ಇದೆ. ಆದರೆ ಈ ಸ್ಫೋಟಕ ವಸ್ತುವನ್ನು ಯಾರು ಎಲ್ಲಿಂದ ಕಳುಹಿಸಿದ್ದರು ಎಂಬುದರ ಕುರಿತು ಇದುವರೆಗೂ ತನಿಖಾ ತಂಡಕ್ಕೆ ಸುಳಿವು ದೊರೆತ್ತಿಲ್ಲ.
ನಗರದ ರೈಲ್ವೆ ನಿಲ್ದಾಣದಲ್ಲಿ ಅಹಿತಕರ ಘಟನೆ, ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಭದ್ರತೆಗಾಗಿ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಆರ್‌ಎಸ್‌ಪಿಎಫ್‌ನ ಒಂದು ಕಂಪನಿಯು ಆಗಮಿಸಿದ್ದು, ಈ ಪಡೆಯು ರೈಲ್ವೆ ನಿಲ್ದಾಣ ಸೇರಿದಂತೆ ಯಾರ್ಡ್, ರೈಲುಗಳಲ್ಲಿ ಭದ್ರತೆ ಕೈಗೊಳ್ಳಲಿದೆ. ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಈ ಪಡೆಯು ಇತರೆ ಪ್ರದೇಶಗಳಲ್ಲೂ ಕಾರ್ಯನಿರ್ವಹಿಸಲಿದೆ. ಸದ್ಯ ಎರಡು ತಿಂಗಳ ಮಟ್ಟಿಗೆ ಈ ಪಡೆಯು ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿದೆ.
-ವಲ್ಲೇಶ್ವರ ಟಕೋಲಾ, ಹಿರಿಯ ವಿಭಾಗೀಯ ಭದ್ರತಾ ಆಯುಕ್ತ, ನೈಋತ್ಯ ರೈಲ್ವೆ ವಲಯ.
-ಶಿವಶಂಕರ ಕಂಠಿ