ಪುತ್ತೂರು : ಮಾತೃಪೂರ್ಣ ಯೋಜನೆಯ ಪಾಕೋಪಕರಣ ಖರೀದಿಗೆ 25.90 ಲಕ್ಷ ರೂ. ಖರ್ಚು ಮಾಡುವುದಕ್ಕೆ ಅನುಮೋದನೆ ನೀಡಲಾಗಿದೆ.ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್ ಅಧ್ಯಕ್ಷತೆಯಲ್ಲಿ ತಾ.ಪಂ. ಸಭಾಂಗಣದಲ್ಲಿ ನಡೆದ ಹಣಕಾಸು, ಲೆಕ್ಕಪರಿಶೋಧನೆ, ಯೋಜನ ಸಮಿತಿ ಸಾಮಾನ್ಯ ಸಭೆ ಈ ನಿರ್ಣಯಕೈಗೊಂಡಿತು. ಶಿಶು ಅಭಿವೃದ್ಧಿ ಇಲಾಖೆ ಸಿಡಿಪಿಒ ಶಾಂತಿ ಹೆಗ್ಡೆ ಪ್ರಸ್ತಾವಿಸಿ, ಅಂಗನವಾಡಿ ಕೇಂದ್ರಗಳಲ್ಲಿ ಮಾತೃ ಪೂರ್ಣ ಯೋಜನೆ ಅನುಷ್ಠಾನವಾಗಿದೆ.
ಇವರಿಗೆ ಬಿಸಿಯೂಟ ತಯಾರಿಸಲು ಪಾಕೋಪಕರಣ ಖರೀದಿ ಅನಿವಾರ್ಯವಾಗಿದೆ. ಪುತ್ತೂರು ತಾ| ಒಟ್ಟು 370 ಅಂಗನವಾಡಿಗಳಿವೆ. ಪ್ರತಿ ಅಂಗನವಾಡಿಗೆ 7000 ರೂ.ನಂತೆ ಅನುದಾನ ಮಂಜೂರು ಮಾಡಬೇಕಿದೆ. 370 ಅಂಗನವಾಡಿಗಳಿಗೆ 25.90 ಲಕ್ಷ ರೂ.ಗೆ ಇ-ಟೆಂಡರ್ ಕರೆಯಲು ಅನುಮತಿ ನೀಡುವಂತೆ ಮನವಿ ಮಾಡಿದರು. ಸ್ಥಾಯಿ ಸಮಿತಿ ನಿರ್ಣಯ ಕೈಗೊಂಡಿತು.
ಶಿಶು ಅಭಿವೃದ್ಧಿ ಯೋಜನೆಯ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ, ಬಾಣಂತಿಯರಿಗೆ ಮಾತೃಪೂರ್ಣ ಯೋಜನೆಯಡಿ ಕೋಳಿಮೊಟ್ಟೆ, ತರಕಾರಿ ಖರೀದಿ ಮಾಡಬೇಕಿದೆ. ಇದಕ್ಕಾಗಿ 1 ಕೋಳಿ ಮೊಟ್ಟೆಗೆ 5.50 ರೂ. ಹಾಗೂ ತರಕಾರಿಗೆ 2 ರೂ.ನಂತೆ ವೆಚ್ಚ ಮಾಡಲು ಅನುಮೋದನೆ ಕೇಳಿದರು. ಶಿಶು ಅಭಿವೃದ್ಧಿ ಯೋಜನೆಯ ಉಪಯೋಗಕ್ಕಾಗಿ ಸ್ಟೀಲ್ ಕಪಾಟು ಖರೀದಿಗೆ ಅನುದಾನ ಅಗತ್ಯವಿದೆ. ಪ್ರತಿ ಕಪಾಟಿಗೆ 8910 ರೂ. ದರವಿದ್ದು, ಎರಡು ಕಪಾಟು ಖರೀದಿಗೆ ಅನುಮೋದನೆ ನೀಡುವಂತೆ ಕೇಳಿಕೊಂಡರು. ಫಲಾನುಭವಿಗಳಿಗೆ ಆಹಾರ ತಯಾರಿಸಲು ಗ್ಯಾಸ್ ಖರೀದಿ ಮಾಡಬೇಕಾಗಿದೆ. ಸಿಲಿಂಡರ್ ಗೆ 628 ರೂ. ಹಾಗೂ 5ರಿಂದ 10 ಕಿ.ಮೀ.ವರೆಗೆ ಟ್ರಿಪ್‌ಗೆ 30 ರೂ.ನಂತೆ ವೆಚ್ಚ ಭರಿಸಬೇಕಿದೆ ಎಂದು ಸಭೆಯ ಗಮನಕ್ಕೆ ತಂದರು.
ತಾ.ಪಂ. ಸದಸ್ಯ ಹರೀಶ್ ಬಿಜತ್ರೆ ಮಾತನಾಡಿ, ಸಂಚಾರಿ ಪಶು ಚಿಕಿತ್ಸಾಲಯ ಗ್ರಾಮೀಣ ಭಾಗಕ್ಕೂ ತೆರಳುವಂತೆ ಸೂಚಿಸಿದರು. ಉತ್ತರಿಸಿದ ಸಹಾಯಕ ನಿರ್ದೇಶಕ, ಪುತ್ತೂರಿನಿಂದ ಹೊರಟ ಸಂಚಾರಿ ಪಶು ಚಿಕಿತ್ಸಾಲಯ ಕೈಕಾರ, ಕುಂಬ್ರ ಪ್ರದೇಶಗಳಿಗೆ ತೆರಳುತ್ತಿದೆ ಎಂದರು. ಸದಸ್ಯೆ ವಲ್ಸಮ್ಮ ಮಾತನಾಡಿ, ಕಡಬ ಭಾಗಕ್ಕೂ ಬಂದರೆ ಜನರಿಗೆ ಉಪಯೋಗವಾಗುತ್ತದೆ ಎಂದು ಸೂಚಿಸಿದರು. ಇದಕ್ಕೆ ಸಿಬಂದಿ ಕೊರತೆ ಇದೆ. ಕಡಬ ಪ್ರತ್ಯೇಕ ತಾಲೂಕು ರಚನೆಯಾ ದೊಡನೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸಹಾಯಕ ನಿರ್ದೇಶಕರು ಹೇಳಿದರು. ತಾ|ಪಂ. ಇಒ ಜಗದೀಶ್, ಯೋಜನಾಧಿಕಾರಿ ಗಣಪತಿ, ಸದಸ್ಯರಾದ ಜಯಂತಿ ಆರ್. ಗೌಡ, ಲಕ್ಷ್ಮಣ ಗೌಡ ಉಪಸ್ಥಿತರಿದ್ದರು.
ಟಯರ್ ಖರೀದಿ
ತಮ್ಮ ಕಚೇರಿಯ ವಾಹನದ ಐದೂ ಟಯರ್‌ಗಳು ಸವೆದುಹೋಗಿದ್ದು, ಖರೀದಿಗೆ 19 ಸಾವಿರ ರೂ. ಮಂಜೂರು ಮಾಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಮನವಿ ಮಾಡಿದರು. ದರಪಟ್ಟಿ ಆಹ್ವಾನಿ ಸಿದ್ದು, ಮೂರು ಸಂಸ್ಥೆಗಳು ದರಪಟ್ಟಿ ಸಲ್ಲಿಸಿವೆ. ಇದರಲ್ಲಿ ಕಡಿಮೆ ವೆಚ್ಚ ತೋರಿಸಿದ ಸಂಸ್ಥೆ ಯಿಂದ ಟಯರ್ ಖರೀದಿಗೆ ನಿಶ್ಚಯಿ ಸಲಾಗಿದೆ ಎಂದರು.
ಕ್ರಿಮಿನಾಶಕ ಖರೀದಿ
ತಾಲೂಕಿನ 17 ಪಶು ವೈದ್ಯಕೀಯ ಸಂಸ್ಥೆಗಳಲ್ಲಿ, ಜೀವ ವೈದ್ಯಕೀಯ ಘನ, ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿಗೆ ಕ್ರಿಯಾ ಯೋಜನೆಯಂತೆ ನಿಗದಿ ಪಡಿಸಿರುವ 1.10 ಲಕ್ಷ ರೂ. ಅನುದಾನದಲ್ಲಿ ರಾಸಾಯನಿಕ, ಕ್ರಿಮಿನಾಶಕ, ಪರಿಕರ ಖರೀದಿಗೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಇದರಲ್ಲಿ 52700 ರೂ.ನಲ್ಲಿ ಕ್ರಿಮಿನಾಶಕ ಖರೀದಿಸಲಾಗಿದೆ. ಉಳಿಕೆ ಮೊತ್ತ 57300 ರೂ.ನಲ್ಲಿ ರಾಸಾಯನಿಕ ಖರೀದಿಗೆ ದರಪಟ್ಟಿ ಆಹ್ವಾನಿಸ ಲಾಗಿದೆ ಎಂದು ಪಶುವೈದ್ಯ ಆಸ್ಪತ್ರೆ ಸಹಾ ಯಕ ನಿರ್ದೇಶಕರು ತಿಳಿಸಿದರು. ಸಭೆ ಅನುಮೋದನೆ ನೀಡಿತು.