ಬೆಂಗಳೂರು: ಬೆಂಗಳೂರಿನಲ್ಲಿ ನಿರಂತರ ಮಳೆಯಿಂದ ಬಡಾವಣೆಗಳು ಕೆರೆಗಳಂತಾಗುವುದನ್ನು ತಪ್ಪಿಸಲು ಪ್ರತಿ ವರ್ಷ ರಾಜ್ಯ ಸರ್ಕಾರ ಸುಮಾರು 800 ಕೋಟಿ ರೂ. ನೀಡಬೇಕು. ಅದೇ ರೀತಿ ಇನ್ನೂ ಎರಡು ಮೂರು ವರ್ಷ ಹಣ ನೀಡಿದರೆ ಸಮಸ್ಯೆಗೆ ಪೂರ್ಣ ಮಟ್ಟದ ಪರಿಹಾರ ದೊರೆಯಲಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಜೋರಾಗಿ ಮಳೆ ಸುರಿದರೆ ನೀರು ಹರಿದು ಹೋಗಲು ರಾಜಕಾಲುವೆಗಳಲ್ಲಿ ಸರಿಯಾದ ಮಾರ್ಗ ಇಲ್ಲದಿರುವುದರಿಂದ ನೀರು ಸುಗಮವಾಗಿ ಹರಿದು ಹೋಗಲು ಮಾರ್ಗ ಬದಲಾವಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಮಳೆ ವೇಳೆ ಮುಳುಗಡೆಯಾಗುವ ಪ್ರದೇಶಗಳಾದ ಕೋರಮಂಗಲ, ಜೆ.ಸಿ.ರಸ್ತೆ, ಶಾಂತಿನಗರ ಬಸ್ ನಿಲ್ದಾಣ, ಎಚ್‌ಎಸ್‌ಆರ್ ಲೇಔಟ್‌ಗಳ ರಾಜಕಾಲುವೆಗಳ ಮಾರ್ಗ ಬದಲಾವಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ. ಈ ಕಾರ್ಯಕ್ಕಾಗಿ ಕಳೆದ ಎರಡು ವರ್ಷಗಳಲ್ಲಿ 800 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.
ಸಂಪೂರ್ಣ ಮಳೆ ನೀರು ಗಾಲುವೆಗಳನ್ನು ಅಭಿವೃದ್ಧಿ ಪಡಿಸಲು ಮುಂದಿನ 2 ವರ್ಷ ಸರ್ಕಾರ ಹಣ ನೀಡಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೇ 2006 ರಿಂದ 13 ವರೆಗೆ 664.21 ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. 2013 ರಿಂದ 17 ರ ವರೆಗೆ 991 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಸುಮಾರು 204 ಕಿ.ಮೀ ನೀರು ಹರಿದು ಹೋಗುವ ಕಾಲುವೆ ದುರಸ್ಥಿಗೊಳಿಸಲಾಗಿದೆ ಎಂದು ಹೇಳಿದರು.
4 ತಿಂಗಳಲ್ಲಿ ಕಸದ ಸಮಸ್ಯೆ ಪರಿಹಾರ: ರಾಜಧಾನಿಯಲ್ಲಿ ಕಸದ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಯೋಜನೆ ರೂಪಿಸುತ್ತಿದೆ. ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಕುರಿತು ಈಗಾಗಲೇ ನಾಲ್ಕೈದು ಕಂಪನಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಶೀಘ್ರವೇ ಕಂಪನಿ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮಾರ್ಚ್ 2018 ರ ಹೊತ್ತಿಗೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಾರ್ಜ್ ಹೇಳಿದ್ದಾರೆ.