Advertisement

ಸಿನಿಮಾ ಹೆಸರಲ್ಲಿ 75 ಲಕ್ಷ ರೂ. ವಂಚನೆ

06:36 AM Mar 12, 2019 | Team Udayavani |

ಬೆಂಗಳೂರು: ಸಿನಿಮಾ ಮಾಡುವುದಾಗಿ ಹೇಳಿ ಆಂಧ್ರಪ್ರದೇಶ ಮೂಲದ ದಂಪತಿಯು ನಗರದ  ಮಹಿಳೆಯೊಬ್ಬರಿಂದ 75 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಈ ಸಂಬಂಧ ಮುನಿಕೊಂಡಪ್ಪ ಲೇಔಟ್‌ ನಿವಾಸಿ ಜಯಶೀಲಾ ಅವರು ಆಂಧ್ರಪ್ರದೇಶ ಮೂಲದ ನರಸಿಂಹ ಪಂತಲು ಮತ್ತು ಅವರ ಪತ್ನಿ ಸುಪ್ರಿಯಾ ವಿರುದ್ಧ ಬಾಗಲಗುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ಹೇಳಿದರು.

ದೂರುದಾರರಾದ ಜಯಶೀಲಾ ಅವರ ಮನೆ ಸಮೀಪವೇ ಆರೋಪಿ ನರಸಿಂಹಪಂತಲು ದಂಪತಿ ವಾಸವಾಗಿದ್ದರು. ಆದರೆ, ಅಷ್ಟಾಗಿ ಪರಿಚಯ ಇರಲಿಲ್ಲ. ಈ ಮಧ್ಯೆ 2017ರಲ್ಲಿ ಸ್ನೇಹಿತೆ ಶಾರದಾ ಮೂಲಕ ಸುಪ್ರಿಯಾ ಪರಿಚಯವಾಗಿದೆ. ಈ ಹಿನ್ನೆಲೆಯಲ್ಲಿ ಜಯಶೀಲಾ ಮನೆಗೆ ಸುಪ್ರಿಯಾ ಪದೇ ಪದೇ ಬರುತ್ತಿದ್ದರು. ಈ ವೇಳೆ ಸುಪ್ರಿಯಾ, “ನನ್ನ ಪತಿ ಸಿನಿಮಾಗಳಿಗೆ ಚಿತ್ರಕಥೆ ಬರೆಯುತ್ತಾರೆ. ಪತಿಯ ಕಥೆಗೆ ಬಹಳಷ್ಟು ಬೇಡಿಕೆ ಇದೆ.

ಈ ಹಿಂದೆ ನಾವೇ ಸಿನಿಮಾ ನಿರ್ಮಾಣ ಮಾಡಿದ್ದೆವು. ಚಿತ್ರ ನಿರ್ಮಾಣ ಮಾಡುವುದರಿಂದ ಒಳ್ಳೆ ಲಾಭ ಕೂಡ ಬರುತ್ತದೆ’. ಪತಿ ಬಳಿ ಸಿನಿಮಾ ಕಥೆಯೊಂದು ಸಿದ್ಧವಾಗಿದ್ದು, ಹಣದ ಸಮಸ್ಯೆಯಿಂದ ಸಿನಿಮಾ ಬಿಡುಗಡೆ ಸಾಧ್ಯವಾಗುತ್ತಿಲ್ಲ. ನೀವು ಹಣದ ಸಹಾಯ ಮಾಡಿದರೆ, ಲಾಭ ಬಂದ ಕೂಡಲೇ ವಾಪಸ್‌ ಕೊಡುವುದಾಗಿ ಸುಪ್ರಿಯಾ ಭರವಸೆ ನೀಡಿದ್ದರು.

 ಸುಪ್ರಿಯಾ ಮಾತು ನಂಬಿದ ಜಯಶೀಲಾ, ತಮ್ಮ ಸ್ನೇಹಿತರು ಮತ್ತು ಪರಿಚಯಸ್ಥರಿಂದ 75 ಲಕ್ಷ ಹಣ ಸಂಗ್ರಹ ಮಾಡಿ 2017 ರಿಂದ 2018ರವರೆಗೆ ವಿವಿಧ ಹಂತದಲ್ಲಿ ಹಣ ನೀಡಿದ್ದಾರೆ. ಹಣ ನೀಡಿ ಹಲವು ತಿಂಗಳಾದರೂ ಸಿನಿಮಾ ಬಿಡುಗಡೆಯಾಗಿಲ್ಲ. ಈ ಬಗ್ಗೆ ದಂಪತಿಯನ್ನು ಪ್ರಶ್ನಿಸಿದರೆ, ಇಲ್ಲದ ಸಬೂಬುಗಳನ್ನು ಹೇಳುತ್ತಿದ್ದು, ಆರೋಪಿ ನರಸಿಂಹಪಂತಲು 2019ರ ಜನವರಿಯಲ್ಲಿ ಸಿನಿಮಾ ಬಿಡುಗಡೆ ಆಗುತ್ತದೆ.

Advertisement

ನಿಮ್ಮ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುತ್ತೇವೆ ಎಂದು ಹೇಳಿದ್ದ. ಆದರೆ, ಇದುವರೆಗೂ ಹಣವೂ ನೀಡಿಲ್ಲ. ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಅಲ್ಲದೆ, ಕೆಲ ದಿನಗಳ ಹಿಂದೆ ದಂಪತಿ ಮನೆ ಖಾಲಿ ಮಾಡಿದ್ದು, ಮೊಬೈಲ್‌ ಸಂಪರ್ಕಕ್ಕೂ ಕೂಡ ಸಿಗುತ್ತಿಲ್ಲ ಎಂದು ಜಯಶೀಲಾ ದೂರಿನಲ್ಲಿ ಆರೋಪಿಸಿರುವುದಾಗಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next