Advertisement

ರಸೆ ಅಭಿವೃದಿಗೆ 75 ಕೋಟಿ ರೂ.

02:11 PM Nov 29, 2018 | Team Udayavani |

ಶಿಡ್ಲಘಟ್ಟ : ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ 75 ಕೋಟಿ ರೂ. ಮಂಜೂರಾಗಿದೆ. ಪಿಎಂಜೆಎಸ್‌ಐ ಯೋಜನೆ ಯಡಿ ಈಗಾಗಲೇ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದ್ದು, ಕ್ಷೇತ್ರಾದ್ಯಂತ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಆದ್ಯತೆ ನೀಡಲಾಗಿದೆ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

Advertisement

ತಾಲೂಕಿನ ಹಿತ್ತಲಹಳ್ಳಿ ಗ್ರಾಮದಲ್ಲಿ 5.68 ಕೋಟಿ ರೂ. ವೆಚ್ಚದಲ್ಲಿ ಸಾರಿಗೆ ಡಿಪೋ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಶಿಡ್ಲಘಟ್ಟ ನಗರದಲ್ಲಿ ಸಂಚಾರ ದಟ್ಟನೆಯನ್ನು ನಿಯಂತ್ರಿಸಲು ರಿಂಗ್‌ರೋಡ್‌ ನಿರ್ಮಿಸಲು ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 150-200 ಕೋಟಿ ರೂ. ಮಂಜೂರು ಮಾಡಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರೈತರ ಸಾಲ ಮನ್ನಾ ಯೋಜನೆಗೆ ಹಣ ಕ್ರೋಢಿಕರಿಸುವ ಪ್ರಕ್ರಿಯೆ ಮುಗಿದ ಬಳಿಕ ಮಂಜೂರಾತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಲಕ್ಕಹಳ್ಳಿಗೇಟ್‌ನಿಂದ ಹರಳಹಳ್ಳಿ ಮೇಲೆ ವರದನಾಯಕನಹಳ್ಳಿ ಇದ್ಲೂಡು ಮೂಲಕ ಗೌಡನಕೆರೆ ಸಂಪರ್ಕಿಸಲು ಮಾರ್ಗದ ಯೋಜನಾ ವೆಚ್ಚವನ್ನು ತಯಾ ರಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭವಷ್ಯದ ಹಿತದೃಷ್ಟಿಯಿಂದ ರಿಂಗ್‌ರೋಡ್‌ ನಿರ್ಮಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

85 ಕಿ.ಮೀ ರಸ್ತೆ ಅಭಿವೃದ್ಧಿ: ತಾವು ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಕೇಂದ್ರದ ಯುಪಿಎ ಸರಕಾರದ ನೆರವಿನೊಂದಿಗೆ
ಸುಮಾರು 85 ಕಿ.ಮೀ ರಸ್ತೆ ಅಭಿವೃದ್ಧಿಗೊಳಿಸಲಾಗಿದೆ. ಪಿಎಂಜೆಎಸ್‌ವೈ ಇನ್ನಿತರೆ ಯೋಜನೆಗಳಡಿ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರೈತರ 49 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಸಾಲ ಮನ್ನಾ ಮಾಡುವ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.

Advertisement

ಕೆರೆಗಳಲ್ಲಿ ಜಾಲಿ ಮರಗಳ ತೆರವು: ಎತ್ತಿನ ಹೊಳೆ ಯೋಜನೆಯ ನೀರನ್ನು ಸಂರಕ್ಷಣೆ ಮಾಡುವ ಸಲುವಾಗಿ ಜಿಲ್ಲೆಯಲ್ಲಿರುವ ಕೆರೆಗಳಲ್ಲಿ ಜಾಲಿ ಮರಗಳನ್ನು ತೆರವುಗೊಳಿಸಿ ಹೂಳು ತೆಗೆದು  ಜಲಮೂಲಗಳನ್ನು ಸಂರಕ್ಷಣೆ ಮಾಡಲು ಗ್ರಾಪಂ, ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸ ಬೇಕೆಂದು ಸೂಚಿಸಿದರು.

ಶಿಡ್ಲಘಟ್ಟಕ್ಕೆ ರೇಷ್ಮೆ ಇಲಾಖೆಯಿಂದ ಯಾವುದೇ ಅನುದಾನ ಬರುವುದಿಲ್ಲ. ನಗರ ಪ್ರದೇಶದ ಸುತ್ತಮುತ್ತ ಕೆರೆಗಳಿದ್ದು ವಾಸ್ತು ದೋಷಗಳಿದ್ದರೂ ಅಭಿವೃದ್ಧಿಗೆ ಹಿನ್ನಡೆ ಯಾಗಿಲ್ಲ. ಜನರ ಭಾವನೆಗಳಿಗೆ ಗೌರವಿಸಿ ವಾಸ್ತುದೋಷ ನಿವಾರಿಸುವ ಪ್ರಯತ್ನ ನಡೆಸುತ್ತಿದ್ದೇವೆ ಎಂದರು.

ದೇಶಾದ್ಯಂತ ಸಮಾನಮನಸ್ಕ ಪಕ್ಷಗಳು ಒಂದೇ ವೇದಿಕೆಯಲ್ಲಿ ಗುರುತಿಸಿಕೊಳ್ಳಲು ತಯಾರಿ ನಡೆಯುತ್ತಿದೆ. ಜಾತ್ಯಾತೀತ ಸರಕಾರ ವನ್ನು ರಚಿಸುವ ಸಲುವಾಗಿ ರಾಜಕೀಯವಾಗಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಸಾವಿರಾರು ಎಟಿಎಂಗೆ ಬೀಗ ಜಡಿಯಲು ಚಿಂತನೆ: ಕೇಂದ್ರ ಸರ್ಕಾರ ಜನ ವಿರೋಧಿ ಧೋರಣೆ ಅನುಸರಿಸುತ್ತಿದೆ. ನೋಟುಗಳ ಅಮಾನ್ಯದಿಂದ ಆರ್ಥಿಕ ಅಶಿಸ್ತು ಎದುರಾಗಿ ಸಾವಿರಾರು ಎಟಿಎಂಗಳಿಗೆ ಬೀಗ ಜಡಿಯಲು ಚಿಂತನೆ ನಡೆದಿದೆ ಎಂದು ಆರೋಪಿಸಿದರು. 

ಜಿಪಂ ಮಾಜಿ ಸದಸ್ಯ ಆರ್‌.ಶ್ರೀನಿವಾಸ್‌, ಎಸ್‌.ಎಂ.ನಾರಾಯಣಸ್ವಾಮಿ, ತಾಪಂ ಸದಸ್ಯ ನರಸಿಂಹಪ್ಪ, ತಾಲೂಕು ಯುವ ಕಾಂಗ್ರೆಸ್‌ ಮುಖಂಡ ಬೆಳ್ಳೂಟಿ ಸಂತೋಷ್‌, ಮಳ ಮಾಚನಹಳ್ಳಿ ಗ್ರಾಪಂ ಅಧ್ಯಕ್ಷ ಭೈರೇಗೌಡ, ಎಪಿಎಂಸಿ ಉಪಾಧ್ಯಕ್ಷ ವೆಂಕಟೇಶ್‌, ಗ್ರಾಪಂ
ಉಪಾಧ್ಯಕ್ಷ ಸುರೇಶ್‌, ಸದಸ್ಯ ಆನೂರು ಮೂರ್ತಿ, ಪಿಡಿಒ ಅರುಣಾಕುಮಾರಿ, ನಗರಸಭೆ ಪೌರಾಯುಕ್ತ ಜಿ.ಎನ್‌.ಚಲಪತಿ, ಅರಣ್ಯ ಇಲಾಖೆ ಅಧಿಕಾರಿ ಲಕ್ಷ್ಮೀ, ವಾಲ್ಮೀಕಿ ಯುವ ವೇದಿಕೆ ಅಧ್ಯಕ್ಷ ಗಿರೀಶ್‌ನಾಯಕ, ಬೆಳ್ಳೂಟಿ ನಾಗೇಶ್‌, ಮಳಮಾಚನಹಳ್ಳಿ ರಾಮಾಂಜಿನಪ್ಪ, ಸಾರಿಗೆ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು. 

ಶಿಡ್ಲಘಟ್ಟ ನಗರದಲ್ಲಿ ಮಳೆ ನೀರು, ಕೊಳಚೆ ನೀರು ಸರಾಗವಾಗಿ ಹರಿಯಲು ಈಗಾಗಲೇ ಮೊದಲ ಹಂತದಲ್ಲಿ ಒಳಚರಂಡಿ ಯೋಜನೆ ಜಾರಿಗೊಳಿಸಲಾಗಿದ್ದು, ಇನ್ನುಳಿದ ಪ್ರದೇಶಗಳಲ್ಲಿ ಎರಡನೇ ಹಂತದ 42 ಕೋಟಿ ರೂ. ವೆಚ್ಚದಲ್ಲಿ ಒಳಚರಂಡಿ ಯೋಜನೆ ಮಂಜೂರಾಗಿದ್ದು, ಶೀಘ್ರದಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುವುದು.
ವಿ.ಮುನಿಯಪ್ಪ , ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next