Advertisement

ಭಾರತಕ್ಕೆ 74 ಸಾವಿರ ರೂ. ದಂಡ!

06:00 AM Jul 28, 2018 | Team Udayavani |

ಗೋಲ್ಡ್‌ಕೋಸ್ಟ್‌: ಕಳೆದ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತೀಯ ಆ್ಯತ್ಲೀಟ್‌ಗಳು ಒಟ್ಟಾರೆ 66 ಪದಕ ಗೆದ್ದು ದೇಶಕ್ಕೆ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದರು. ಇದೀಗ ಈ ಆ್ಯತ್ಲೀಟ್‌ಗಳ ವಿರುದ್ಧವೇ ಅಶಿಸ್ತಿನ ದೂರು ದಾಖಲಾಗಿದೆ. ಶಿಸ್ತು ತಪ್ಪಿದ ಭಾರತೀಯರಿಗೆ ಕಾಮನ್ವೆಲ್ತ್‌ ಗೇಮ್ಸ್‌ ಕೂಟದ ಸಂಯೋಜಕರು 74 ಸಾವಿರ ರೂ. ದಂಡ ವಿಧಿಸಿದ್ದಾರೆ!

Advertisement

ಗೋಲ್ಡ್‌ಕೋಸ್ಟ್‌ ಕ್ರೀಡಾಗ್ರಾಮ ದಲ್ಲಿ ಭಾರತದ ಕ್ರೀಡಾಪಟು ಗಳು ಬೇಕಾಬಿಟ್ಟಿಯಾಗಿ ನಡೆದು ಕೊಂಡಿದ್ದಾರೆ. ಕೊಠಡಿಗಳ ಪೀಠೊ ಪಕರಣಗಳಿಗೆ ಹಾನಿ ಮಾಡಿದ್ದಾರೆ. ಅದರಲ್ಲೂ ಬಾಸ್ಕೆಟ್‌ಬಾಲ್‌ ತಂಡ ತಂಗಿದ್ದ ಕೊಠಡಿಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಉಳಿದಂತೆ ತುಂಬ ಹಾನಿಯಾಗಿರುವುದು ಹಾಕಿ ತಂಡ ತಂಗಿದ್ದ ಕೊಠಡಿಯಲ್ಲಿ ಎಂದು ಐಒಎಗೆ (ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ) ಸಂಘಟಕರು ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಯಾವ್ಯಾವುದಕ್ಕೆ ಹಾನಿ?
ಡೋರ್‌ ಲಾಕ್‌ ಕೀ ಮುರಿದು ಹೋಗಿದೆ. ಬಟ್ಟೆ ಹಾಕಲು ಅಳವಡಿಸಿದ್ದ ಉಪಕರಣ ಸಂಪೂರ್ಣ ಹಾಳಾಗಿದೆ. ಹಾಸಿಗೆ, ಸೋಫಾ, ದಿಂಬಿಗೆ ಅಳವಡಿಸಿದ್ದ ಕುಷನ್‌ ಕವರ್‌ಗಳು ಹರಿದು ಹೋಗಿವೆ. ಪವರ್‌ ಬೋರ್ಡ್ಸ್‌ ಮತ್ತು ಯುಎಸ್‌ಬಿ ಔಟ್‌ಲೆಟ್‌ಗಳು ಕೂಡ ಮುರಿದು ಹೋಗಿವೆ.

ಸಂಘಟಕರ ಪತ್ರದಲ್ಲೇನಿದೆ?
ಮಾನ್ಯರೇ, ನಿಮ್ಮ ಸ್ಪರ್ಧಿಗಳು ಕೂಟಕ್ಕೆಂದು ಬಂದವರು ಬೆಲೆ ಬಾಳುವ ವಸ್ತುಗಳಿಗೆ ಹಾನಿ ಮಾಡಿದ್ದಾರೆ. ಇದೆಲ್ಲದರ ಒಟ್ಟಾರೆ ಮೊತ್ತ 74 ಸಾವಿರ ರೂ. ಆಗಿದೆ. ಇದನ್ನು ನೀವು ನಿಮ್ಮ ಸಂಸ್ಥೆಯಿಂದ ಪಾವತಿಸಬೇಕು ಎಂದು ಐಒಎ ಅಧ್ಯಕ್ಷ ನರೇಂದ್ರ ಬಾತ್ರಾಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಕ್ರೀಡಾಪಟುಗಳಿಂದಲೇ ಹಣ ಸಂಗ್ರಹ: ಬಾತ್ರಾ
ಸಂಘಟಕರು ಪತ್ರ ಬಂದ ಬೆನ್ನಲ್ಲೇ ಐಒಎ ಕ್ರೀಡಾಪಟುಗಳ ಅಶಿಸ್ತನ್ನು ಖಂಡಿಸಿದೆ. ಬೆಲೆ ಬಾಳುವ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಪ್ರದರ್ಶಿಸಿದ ಆ್ಯತ್ಲೀಟ್‌ಗಳಿಂದ ಹಣವನ್ನು ಸಂಗ್ರಹಿಸಲು ನಿರ್ಧರಿಸಿದೆ. ಈ ವಿಷಯವನ್ನು ನರೇಂದ್ರ ಬಾತ್ರಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆ್ಯತ್ಲೀಟ್‌ಗಳು, ಅಧಿಕಾರಿಗಳು ತಂಗಿದ್ದ ಕೊಠಡಿಯಲ್ಲಿ ಇಂತಹ ಅವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಬೇಸರದ ವಿಷಯ. ಸಂಬಂಧಪಟ್ಟ  ಕ್ರೀಡಾ ಒಕ್ಕೂಟಗಳು ಇದಕ್ಕೆ ಸೂಕ್ತ ಉತ್ತವನ್ನು ನೀಡಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಂದಲೇ ಹಣವನ್ನು ಸಂಗ್ರಹ ಮಾಡಲಾಗುವುದು ಎಂದು ಬಾತ್ರಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next