ಬೆಂಗಳೂರು: ಬೈಕ್ ಕಳವು ಪ್ರಕರಣದ ಜಾಡುಹಿಡಿದು ತನಿಖೆ ನಡೆಸುತ್ತಿದ್ದ ಪೀಣ್ಯ ಠಾಣೆ ಪೊಲೀಸರು, ಮನೆಗಳವು ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಲೀಂ (21), ಮೊಹಮದ್ ಷಫಿ (30) ಇಮ್ರಾನ್ ಪಾಷ (23) ಲೋಕೇಶ ಅಲಿಯಾಸ್ ಕೆಂಚ (39) ಬಂಧಿತರು. ಆರೋಪಿಗಳಿಂದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳು ಹಲವು ವರ್ಷಗಳಿಂದ ಮನೆಗಳವು, ರಾಬರಿ ಪ್ರಕರಣಗಳಲ್ಲಿ ತೊಡಗಿದ್ದು ಈ ಹಿಂದೆಯೂ ಬಂಧಿತರಾಗಿ ಜೈಲು ಸೇರಿದ್ದರು. ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿ ಮತ್ತೆ ಹಳೆ ಚಾಳಿ ಮುಂದುವರಿಸಿದ್ದರು. ಹಗಲಿನಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ಆ ಮನೆಗಳ ಬೀಗ ಮುರಿದು ಚಿನ್ನಾಭರಣ ದೋಚುತ್ತಿದ್ದರು.
ಚಿನ್ನಾಭರಣ ಅಡವಿಟ್ಟು ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಆಲೂರು ತಾಲೂಕಿನ ಲೋಕೇಶ್ ಅಲಿಯಾಸ್ ಕೆಂಚ 2018ರಲ್ಲಿ ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾಟಹಳ್ಳಿ ಮಧು ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಜೈಲು ಸೇರಿದ್ದ. ಬಿಡುಗಡೆಯಾದ ನಂತರ ನಗರದಲ್ಲಿ ರಾಬರಿ ಕೃತ್ಯಗಳಲ್ಲಿ ತೊಡಗಿದ್ದ.
ಜ.18ರಂದು ಎಚ್‌ಎಂಟಿ ಲೇಔಟ್‌ನಲ್ಲಿರುವ ಪಾರ್ಕ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವು ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಆರೋಪಿ ಅಬೂಬಕರ್ ಸಿಕ್ಕಿಬಿದ್ದ. ಆತ ನೀಡಿದ ಸುಳಿವು ಆಧರಿಸಿ ಉಳಿದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ 6 ಕಳವು, ಒಂದು ದರೋಡೆ ಪ್ರಕರಣ ಬೆಳಕಿಗೆ ಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.