Advertisement

6,980 ಕೋಟಿ ರೂ.ಪೂರಕ ಬಜೆಟ್‌ಗೆ ಅನುಮೋದನೆ

09:19 AM Dec 19, 2018 | Team Udayavani |

ವಿಧಾನಸಭೆ: ಪ್ರತಿಪಕ್ಷ ಬಿಜೆಪಿ ಸದಸ್ಯರ ವಿರೋಧದ ನಡುವೆಯೇ 2018-19ನೇ ಸಾಲಿನ 6980.88 ಕೋಟಿ ರೂ.ಗಳ ಪೂರಕ ಬಜೆಟ್‌ಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ಮಂಡಿಸಿದ್ದ ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಬಿಜೆಪಿ ಶಾಸಕರು, ಪೂರಕ ಅಂದಾಜುಗಳ ಅಗತ್ಯತೆಯನ್ನು ಪ್ರಶ್ನಿಸಿದರು. ಬಿಜೆಪಿಯ
ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸರ್ಕಾರ ಮಂಡನೆ ಮಾಡಿರುವುದಕ್ಕೆಲ್ಲಾ ಒಪ್ಪಿಗೆ ನೀಡಲು ಸಾಧ್ಯವಿಲ್ಲ. ಲೋಕೋಪಯೋಗಿ ಇಲಾಖೆಯ ಬಾಕಿ ಬಿಲ್‌ ಪಾವತಿಗೆ 1,900 ಕೋಟಿ ರೂ.ನೀಡಲಾಗುತ್ತಿದೆ. ಯಾವ ಅವಧಿಯ ಬಾಕಿ ಬಿಲ್‌ ನೀಡಲಾಗುತ್ತಿದೆ ಬಜೆಟ್‌
ಮಂಡನೆ ಸಂದರ್ಭದಲ್ಲಿ ಬಾಕಿ ಬಿಲ್‌ಗ‌ಳು ಇರಲಿಲ್ಲವೇ ಎಂದು ಪ್ರಶ್ನಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಹಿಂದಿನ ಬಾಕಿ ಬಿಲ್‌ ಇಡಬಾರದೆಂದೇನೂ ಇಲ್ಲ. ಯಾವ ಸರ್ಕಾರ ಏನು ಮಾಡಿದೆ ಎಂದು ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು. ಬಿಜೆಪಿಯ ರಾಮದಾಸ್‌ ಮಾತನಾಡುವ
ಸಂದರ್ಭದಲ್ಲಿ ಜೆಡಿಎಸ್‌ನ ಶಿವಲಿಂಗೇಗೌಡ, ಆಡಳಿತ ಪಕ್ಷದ ಸದಸ್ಯರಿಗೂ ಚರ್ಚಿಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ, ಕುಮಾರಸ್ವಾಮಿ, ನಾವು ಯಾವುದೇ ಸ್ವಂತ ಖರ್ಚಿಗಾಗಿ ಪೂರಕ ಬಜೆಟ್‌ ಮಂಡನೆ ಮಾಡುತ್ತಿಲ್ಲ. 2006ರಲ್ಲಿ ಹಣಕಾಸು ಸಚಿವರು ಜೇಬಿನಲ್ಲಿನ ಚೀಟಿ ತೆಗೆದು ಬಜೆಟ್‌ನಲ್ಲಿ ಸೇರಿಸಿದ್ದರು. ಆಗ ಮಾಧುಸ್ವಾಮಿ ಮೌನವಾಗಿದ್ದರು ಎಂದು ಹೇಳಿ ನಗುತ್ತಾ ಕುಳಿತರು.

ಇದಕ್ಕೆ ಆಕ್ಷೇಪಿಸಿದ ಜೆ.ಸಿ.ಮಾಧುಸ್ವಾಮಿ, ಮುಖ್ಯಮಂತ್ರಿಗೆ ಗಂಭೀರತೆಯೇ ಇಲ್ಲ. ನನಗೆ ವ್ಯಕ್ತಿ ಮುಖ್ಯವಲ್ಲ. ಆಗಲೂ ನಾನೂ ವಿರೋಧಿಸಿದ್ದೆ ಎಂದು ಸ್ಪಷ್ಟಪಡಿಸಿದರು. ಮಾಧುಸ್ವಾಮಿ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದರು. ಈ ಸಂದರ್ಭದಲ್ಲಿ
ಎರಡೂ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ, ಕುಮಾರಸ್ವಾಮಿಯವರು ಪೂರಕ ಬಜೆಟ್‌ನ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿ, ವಿಧೇಯಕ ಅಂಗೀಕರಿಸುವಂತೆ ಮನವಿ ಮಾಡಿದರು. ಆದರೆ, ಅನಗತ್ಯ ಹಣ ವ್ಯಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ನಂತರ ವಿಧೇಯಕಕ್ಕೆ ಅಂಗೀಕಾರ  ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next