ನವದೆಹಲಿ: ಕುರಾನ್ ಗ್ರಂಥದಲ್ಲಿರುವ ನಿರ್ದಿಷ್ಟ ಸೂಕ್ತಗಳನ್ನು ತೆಗೆದುಹಾಕಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ(ಏಪ್ರಿಲ್ 12) ವಜಾಗೊಳಿಸಿದ್ದು, ಇದೊಂದು ನಿಷ್ಪ್ರಯೋಜಕ ಬೇಡಿಕೆ ಎಂದು ಅಭಿಪ್ರಾಯವ್ಯಕ್ತಪಡಿಸಿ ಅರ್ಜಿದಾರನಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ:ಸಿಡಿ ಪ್ರಕರಣ : ನರೇಶ್-ಶ್ರವಣ್ ನನ್ನ ಹನಿಟ್ರ್ಯಾಪ್ ಗೆ ಬಳಸಿಕೊಂಡಿದ್ರು ಎಂದ ಯುವತಿ!
ಅರ್ಜಿದಾರ ಉತ್ತರಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸೀಂ ರಿಝ್ವಿ ಅವರು, ಕುರಾನ್ ನಲ್ಲಿರುವ 26 ಸೂಕ್ತಗಳನ್ನು ರದ್ದುಗೊಳಿಸಬೇಕು. ಇದು ಮೂಲ ಕುರಾನಿನ ಭಾಗವಲ್ಲ ಎಂದು ಸುಪ್ರೀಂಗೆ ಸಲ್ಲಿಸಿರುವ ಪಿಐಎಲ್ ನಲ್ಲಿ ಪ್ರತಿಪಾದಿಸಿದ್ದರು.
ಈ ವಿವಾದಿತ ಅರ್ಜಿಯಲ್ಲಿ, ಕುರಾನ್ ನಲ್ಲಿರುವ 26 ಸೂಕ್ತಗಳು ದೇಶದ ಕಾನೂನನ್ನು ಉಲ್ಲಂಘಿಸುತ್ತದೆ. ಅಷ್ಟೇ ಅಲ್ಲ ಇಸ್ಲಾಂ ಧರ್ಮದ ಮೂಲ ಆಶಯಕ್ಕೆ ವಿರುದ್ಧವಾಗಿ ಮುಸ್ಲಿಮೇತರರ ಮೇಲಿನ ದಾಳಿಯನ್ನು ಸಮರ್ಥಿಸಿಕೊಳ್ಳಲು ಬಳಸಿಕೊಳ್ಳಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ.
“ ನೀವು ಈ ಅರ್ಜಿಯನ್ನು ಗಂಭೀರವಾಗಿ ಸಲ್ಲಿಸಿದ್ದೀರಾ” ಎಂದು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಪ್ರಶ್ನಿಸಿದ್ದು, ಇದೊಂದು ನಿಷ್ಪ್ರಯೋಜಕ ದೂರು ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಕುರಾನ್ ನಲ್ಲಿರುವ ಈ 26 ಸೂಕ್ತಗಳನ್ನು ಮದರಸಾಗಳಲ್ಲಿ ಮಕ್ಕಳಿಗೆ ಕಲಿಸಲಾಗುತ್ತಿದೆ. ಇದರ ಪರಿಣಾಮ ಗಡಿ ಭಯೋತ್ಪಾನೆಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಅರ್ಜಿದಾರ ವಾಸೀಂ ರಿಜ್ವಿ ತಿಳಿಸಿದ್ದಾರೆ.