ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿ ಪೊಲೀಸ್ಟರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಮಾಜಿ ರೌಡಿಶೀಟರ್ ನಾಗರಾಜ್‌ಗೆ ಮತ್ತೂಂದು ಸಂಕಟ ಎದುರಾಗಿದೆ. ಹಳೆ ನೋಟುಗಳ ಬದಲಾವಣೆ ನೆಪದಲ್ಲಿ ಐದು ಕೋಟಿ ರೂ. ವಂಚಿಸಲಾಗಿದೆ ಎಂದು ಆರೋಪಿಸಿ ರಿಯಲ್ ಎಸ್ಟೇಟ್ ಏಜೆಂಟ್ ಅರುಣ್ ಎಂಬುವರು ನಾಗರಾಜ್ ವಿರುದ್ಧ ಶ್ರೀರಾಮಪುರ ಠಾಣೆಗೆ ದೂರು ನೀಡಿದ್ದಾರೆ.
ಮತ್ತೂಂದೆಡೆ ಶುಕ್ರವಾರ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ನಾಗರಾಜ್ ವಿರುದ್ಧ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ತಮ್ಮ ಠಾಣೆಯಲ್ಲೇ ದೂರು ದಾಖಲಿಸಿಕೊಂಡಿದ್ದಾರೆ.
ಹಲ್ಲೆ ನಡೆಸಿ ವಂಚನೆ: ಕಮಿಷನ್ ಆಧಾರದ ಮೇಲೆ ಹಳೇ ನೋಟುಗಳನ್ನು ಬದಲಾವಣೆ ಮಾಡಿಕೊಡುವುದಾಗಿ ಮನೆಗೆ ಕರೆಸಿಕೊಂಡ ನಾಗರಾಜ್ ತನ್ನ ಬೆಂಬಲಿಗರು ಹಾಗೂ ಇಬ್ಬರು ಮಕ್ಕಳ ಮೂಲಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಐದು ಕೋಟಿ ರೂ. ವಂಚನೆ ಮಾಡಿದ್ದಾನೆ. ಅಲ್ಲದೆ, ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದ ಎಂದು ಅರುಣ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಾಗರಬಾವಿ ನಿವಾಸಿ ಅರುಣ್ ಗ್ಯಾರೆಜ್ ಒಂದರ ಮಾಲೀಕರಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಸೆಲ್ವಂ ಎಂಬ ಮಧ್ಯವರ್ತಿಯ ಮೂಲಕ ಪರಿಚಯವಾದ ನಾಗರಾಜ್, ಹಳೇ ನೋಟುಗಳನ್ನು ಶೇ.25ರಷ್ಟು ಕಮಿಷನ್ ಆಧಾರದ ಮೇಲೆ ಬದಲಾವಣೆ ಮಾಡಿಕೊಡುವುದಾಗಿ ಹೇಳಿದ್ದ.
ಅದರಂತೆ ಪರಿಚಯಸ್ಥರು ಹಾಗೂ ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳ 5 ಕೋಟಿ ರೂ. ಹಳೆ ನೋಟುಗಳ ಬದಲಾವಣೆ ಮಾಡಿಕೊಳ್ಳಲು ಜನವರಿ 7ರಂದು ನಾಗರಾಜ್ ಮನೆಗೆ ಹೋಗಿದ್ದೆ. ಆ ವೇಳೆ ಕಮಿಷನ್ ವಿಚಾರದಲ್ಲಿ ಇಬ್ಬರ ನಡುವೆ ಮಾತುಕತೆ ನಡೆಯಿತು. ಆಗ ನಾಗರಾಜ್, ಇಬ್ಬರು ಮಕ್ಕಳಾದ ಶಾಸ್ತ್ರೀ ಮತ್ತು ಗಾಂಧಿ ಹಾಗೂ ಆತನ ಬೆಂಬಲಿಗರು ಪಿಸ್ತೂಲ್ ಮತ್ತು ಮಾರಕಾಸ್ತ್ರಗಳಿಂದ ಬೆದರಿಕೆ ಹಾಕಿದರು.
ಅಲ್ಲದೆ, ಕೊಂಡೊಯ್ದಿದ್ದ ಹಳೆ ನೋಟುಗಳನ್ನು ವಾಪಸ್ ಕೊಡದೆ, ಬೇರೆ ನೋಟುಗಳನ್ನೂ ನೀಡದೆ ಮನೆಯಿಂದ ಹೊರಹಾಕಿದ್ದರು ಎಂದು ಅರುಣ್ ದೂರಿನಲ್ಲಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಶುಕ್ರವಾರ ಬಿಡುಗಡೆಯಾದ ಒಂದೂವರೆ ಗಂಟೆ ವಿಡಿಯೋದಲ್ಲಿ ಹೆಣ್ಣೂರು ಠಾಣೆ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಅವರನ್ನು ನಾಗರಾಜ್ ಅವಹೇಳನಕಾರಿಯಾಗಿ ನಿಂದಿಸಿದ್ದ. ಈ ಮೂಲಕ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದ. ಈ ಸಂಬಂಧ ಇನ್‌ಸ್ಪೆಕ್ಟರ್ ಶ್ರೀನಿವಾಸ್ ಅವರು ನಾಗರಾಜ್ ವಿರುದ್ಧ ದೂರು ನೀಡಿದ್ದಾರೆ.
150 ಕೋಟಿ ರೂ. ದಂಡ?
ಗರಿಷ್ಠ ಮುಖ ಬೆಲೆಯ ನೋಟುಗಳು ಅಮಾನ್ಯಗೊಂಡ ಬಳಿಕ ಕೇಂದ್ರ ಸರ್ಕಾರ ಜಾರಿಗೆ ತಂದ ನಿಯಮದ ಪ್ರಕಾರ ಸಾರ್ವಜನಿಕರು 10ಕ್ಕಿಂತ ಅಧಿಕ ಹಳೆ ನೋಟುಗಳನ್ನು ಹೊಂದುವಂತಿಲ್ಲ. ಆದರೆ, ಪೊಲೀಸರ ದಾಳಿ ಸಂದರ್ಭದಲ್ಲಿ ನಾಗರಾಜ್ ಮನೆಯಲ್ಲಿ 14.80 ಕೋಟಿ ರೂ. ಮೌಲ್ಯದ 500 ಮತ್ತು 1000 ಮುಖ ಬೆಲೆಯ ನೋಟುಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ನಾಗರಾಜ್‌ಗೆ ಸಂಗ್ರಹದ ಹಣದ ಮೇಲೆ 10 ಪಟ್ಟು ದಂಡ ವಿಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.