Advertisement

467 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ಅಭಿವೃದ್ಧಿ

06:00 AM Jul 25, 2018 | |

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 7,800 ಹೆಚ್ಚುವರಿ ಕೊಠಡಿ ನಿರ್ಮಾಣ ಮತ್ತು 21 ಸಾವಿರ ಶಾಲೆಗಳ ದುರಸ್ತಿಗೆ 467 ಕೋಟಿ ರೂ.ವೆಚ್ಚ ಮಾಡಲು ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೆ, ಉನ್ನತ ಶಿಕ್ಷಣ, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಶಿಕ್ಷಣ ಕ್ಷೇತ್ರದಲ್ಲಿ ಪ್ರಯೋಗಾಲಯ ಸೇರಿ ಮೂಲ ಸೌಕರ್ಯ ಕಲ್ಪಿಸಲು 500 ಕೋಟಿ ರೂ.ವೆಚ್ಚ ಮಾಡಲು ಕೂಡ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

Advertisement

ವಿಧಾನಸೌಧದ ಸಮಿತಿಯ ಕೊಠಡಿಯಲ್ಲಿ ಮಂಗಳವಾರ ಬೈಸಿಕಲ್‌ ವಿತರಣೆ ಕುರಿತು ಹಾಗೂ ಸರ್ಕಾರಿ ಶಾಲಾ-ಕಾಲೇಜು ಮತ್ತು ಸ್ನಾತಕೋತ್ತರ ಶಿಕ್ಷಣ ಸಂಸ್ಥೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕುರಿತಂತೆ ಸಂಬಂಧಿಸಿದ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜತೆ ನಡೆದ ಸಭೆಯಲ್ಲಿ ಈ
ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಸರ್ಕಾರದಿಂದ ನಡೆಯುತ್ತಿರುವ ಪ್ರಾಥಮಿಕ, ಪ್ರೌಢ ಶಾಲೆಗಳು, ಪದವಿ ಪೂರ್ವ, ಪದವಿ ಕಾಲೇಜುಗಳು, ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ ಶಿಕ್ಷಣ ಸಂಸ್ಥೆಗಳಲ್ಲಿ ಕಟ್ಟಡ ಸೇರಿ ಮೂಲ ಸೌಕರ್ಯ ಒದಗಿಸಲು ಹಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಾಲೂಕು ಮಟ್ಟದ ಸಮಿತಿ ರಚನೆ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಸರ್ಕಾರದಿಂದ ವಿತರಿಸುವ ಪಠ್ಯ, ಸಮವಸ್ತ್ರ ಮತ್ತು ಬೈಸಿಕಲ್‌ಗ‌ಳ ಗುಣಮಟ್ಟ ಪರಿಶೀಲನೆಗೆ ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಬೇಕು. ಎಂಟನೇ ತರಗತಿ ಮಕ್ಕಳಿಗೆ ಉಚಿತ ಬೈಸಿಕಲ್‌ ವಿತರಿಸುವ ಯೋಜನೆಯಡಿ ಹಿಂದಿನ ವರ್ಷ ವಿತರಿಸಿದ ಸೈಕಲ್‌ಗ‌ಳ ಗುಣಮಟ್ಟದ ಬಗ್ಗೆ ಪೋಷಕರು ಅತೃಪ್ತಿ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಈ ಬಾರಿ ಗುಣಮಟ್ಟದ ಸೈಕಲ್‌ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸಭೆಯಲ್ಲಿ ಸೂಚಿಸಿದ್ದಾರೆ.

ರಾಜ್ಯದಲ್ಲಿರುವ ಸರ್ಕಾರಿ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಿ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕೊಠಡಿಗಳು, ಪ್ರಯೋಗಾಲಯ, ಶೌಚಾಲಯ, ಗ್ರಂಥಾಲಯ ಮತ್ತಿತರ ಅಗತ್ಯ ಸೌಲಭ್ಯಗಳ ಕೊರತೆ ಇದೆ. ತಾವು ಹಿಂದೆ
ಮುಖ್ಯಮಂತ್ರಿಯಾಗಿದ್ದಾಗ ಮಂಜೂರು ಮಾಡಿದ್ದ ಶಾಲಾ ಕಾಲೇಜುಗಳಲ್ಲಿಯೂ ಮೂಲ ಸೌಕರ್ಯಗಳ ಕೊರತೆ ಇದೆ. ಇವುಗಳನ್ನು ಸರಿಪಡಿಸಲು ಕೂಡಲೇ ಕಾರ್ಯಪ್ರವೃತ್ತರಾಗಿ. ಹಣಕಾಸಿನ ಕೊರತೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ತಮ್ಮದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅಗತ್ಯ ಮೂಲ ಸೌಕರ್ಯಕ್ಕೆ ಕೋಟ್ಯಂತರ ರೂ.ಬೇಕಾಗಿದ್ದು, ಕೇವಲ ಸರ್ಕಾರದಿಂದ ಮಾತ್ರ ಇದನ್ನು ಭರಿಸುವುದು ಕಷ್ಟವಾಗಬಹುದು. ಕಾರ್ಪೋರೇಟ್‌ ಕಂಪನಿಗಳು ನೆರವು ನೀಡಿದರೂ ಇನ್ನಷ್ಟು ಹಣ ಬೇಕಾಗುತ್ತದೆ. ಹೀಗಾಗಿ, ಹಿರಿಯ ವಿದ್ಯಾರ್ಥಿಗಳ ನೆರವು ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಅದಕ್ಕಾಗಿ ಎಲ್ಲಾ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘಗಳನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ವಿವಿಧ ಇಲಾಖೆಗಳ
ಹಿರಿಯ ಅಧಿಕಾರಿಗಳು ಹಾಜರಿದ್ದರು.

ಕಾಲು ಸೇತುವೆ ನಿರ್ಮಾಣ
ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಅನುಕೂಲವಾಗುವಂತೆ ತೂಗು ಸೇತುವೆಗಳ ಬದಲು ಕಾಲು ಸೇತುವೆಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಒಂದು ತಿಂಗಳಲ್ಲಿ ವಿವರವಾದ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಅಧಿಕಾರಿಗಳೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಮಕ್ಕಳು ತೂಗು ಸೇತುವೆಯಲ್ಲಿ ಆತಂಕದಿಂದಲೇ ಶಾಲೆಗೆ ಹೋಗುವ ಅನಿವಾರ್ಯತೆ ಇದೆ. ಇತ್ತೀಚೆಗೆ ಬಾಲಕಿಯೊಬ್ಬಳು ತೂಗು ಸೇತುವೆಯಿಂದ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಸಂಪೂರ್ಣ ರಕ್ಷಣೆ ನೀಡಲು ಸರ್ಕಾರ ಬದಟಛಿವಾಗಿದೆ. ಮುಂದಿನ ಮಳೆಗಾಲದ ಒಳಗಾಗಿ ಈ ವ್ಯವಸ್ಥೆ ಮಾಡಬೇಕು ಮತ್ತು ಈ ವ್ಯವಸ್ಥೆ ಶಾಶ್ವತವಾಗಿರಬೇಕು ಎಂಬ ಕಾರಣಕ್ಕಾಗಿ ತೂಗು ಸೇತುವೆ ಬದಲು ಕಾಲು ಸೇತುವೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಈ ಕುರಿತಂತೆ ಒಂದು ತಿಂಗಳಲ್ಲಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವರದಿ ಬಂದ ಮೇಲೆ ಆದ್ಯತೆ ಮೇಲೆ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next