Advertisement

ಜಿಪಂನಲ್ಲಿ 435,91 ಕೋಟಿ ರೂ. ಆಯವ್ಯಯ

07:31 AM Mar 09, 2019 | Team Udayavani |

ಮೈಸೂರು: ಮೈಸೂರು ಜಿಲ್ಲಾ ಪಂಚಾಯತ್‌ನ 2019-20ನೇ ಸಾಲಿನ ವಾರ್ಷಿಕ ಆಯವ್ಯಯವನ್ನು ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳಾ ಶ್ಯಾಂ ಮಂಡಿಸಿದರು. ಲಿಂಕ್‌ ಡಾಕ್ಯುಮೆಂಟ್‌ನಲ್ಲಿ ಸರ್ಕಾರ ಮೈಸೂರು ಜಿಲ್ಲೆಯ ಜಿಪಂ, ತಾಪಂ ಹಾಗೂ ಗ್ರಾಪಂಗಳಿಗೆ ಪ್ರತ್ಯೇಕವಾಗಿ ಅನುದಾನ ನಿಗದಿಪಡಿಸಿದ್ದು, ವಿವಿಧ ಕಾರ್ಯಕ್ರಮಗಳಡಿ 2019-20ನೇ ಸಾಲಿಗೆ 1,302,12 ಕೋಟಿ ಅನುದಾನ ನಿಗದಿಪಡಿಸಿದೆ. ಇದರಲ್ಲಿ ಜಿಪಂ ವೇತನ ಬಾಬ್ತು 127,77 ಕೋಟಿ ಹಾಗೂ ವೇತನೇತರ ಬಾಬ್ತು 308,14 ಕೋಟಿ ರೂ., ಒಟ್ಟು 435,91 ಕೋಟಿ ರೂ. ನಿಗದಿಪಡಿಸಲಾಗಿದೆ. 

Advertisement

2018-19ನೇ ಸಾಲಿನಲ್ಲಿ ಜಿಪಂ, ತಾಪಂ ಮತ್ತು ಗ್ರಾಪಂಗಳು ಸೇರಿದಂತೆ ಬಿಡುಗಡೆಯಾದ ಒಟ್ಟು 1,109,26 ಕೋಟಿ ರೂ. ಅನುದಾನದಲ್ಲಿ ಮೈಸೂರು ಜಿಪಂಗೆ 387,74  ಕೋಟಿ ಬಿಡುಗಡೆ ಮಾಡಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 2019-20ನೇ ಸಾಲಿಗೆ ಶೇ.12.42ರಷ್ಟು ಅಂದರೆ 48,16 ಕೋಟಿ ರೂ. ಹೆಚ್ಚಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಯ 2019-20ನೇ ಸಾಲಿನ ಆಯವ್ಯಯ ಅಂದಾಜುಗಳ ಲೆಕ್ಕ ಶೀರ್ಷಿಕೆವಾರು ಇಲಾಖಾ ಕಾರ್ಯಕ್ರಮಗಳಿಗೆ ಹಂಚಿಕೆ ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ:  6 ರಿಂದ 14 ವರ್ಷದ ಪ್ರತಿಯೊಂದು ಮಗುವಿಗೂ ಮೂಲಭೂತವಾಗಿ ಪ್ರಾಥಮಿಕ ಹಂತದ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಎಲ್ಲಾ ಜನವಸತಿ ಗ್ರಾಮಗಳಲ್ಲಿ ಪ್ರಾಥಮಿಕ ಶಾಲೆಗಳನ್ನು ನೀಡಿ, ಅಂತಹ ಶಾಲೆಗಳಲ್ಲಿನ ಮಕ್ಕಳಿಗೆ ಶಾಲಾ ಕಟ್ಟಡ, ಶೌಚಾಲಯ, ಕುಡಿಯುವ ನೀರು ಇನ್ನಿತರ ಸೌಲಭ್ಯಗಳೊಂದಿಗೆ ಅಗತ್ಯ ಶಿಕ್ಷಕರನ್ನು ನೀಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸರ್ಕಾರ ವಿವಿಧ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿದೆ. ಇದಕ್ಕಾಗಿ ಈ ಸಾಲಿನಲ್ಲಿ 158.42 ಕೋಟಿ ರೂ. ಅನುದಾನವನ್ನು ಪ್ರಸ್ತಾಪಿಸಲಾಗಿದೆ.

ಬಿಸಿಯೂಟ: 1 ರಿಂದ 8ನೇ ತರಗತಿವರೆಗೆ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹಾಗೂ 9 ಮತ್ತು 10ನೇ ತರಗತಿಗಳಿಗೆ ರಾಜ್ಯ ಸರ್ಕಾರದ ಪೂರ್ಣ ಅನುದಾನದಿಂದ ಮಧ್ಯಾಹ್ನದ ಬಿಸಿಯೂಟ ಒದಗಿಸಲಾಗುತ್ತಿದೆ. ಪ್ರಸ್ತುತ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಕಾರ್ಯಕ್ರಮದಡಿ ಜಿಲ್ಲೆಯ ಒಟ್ಟು 2,383 ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಒಳಪಡಿಸಲಾಗಿದೆ.

ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಮೈಸೂರು ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ವಲಯಗಳ 159 ಶಾಲೆಗಳಿಗೆ ಅಕ್ಷಯ ಪಾತ್ರಾ ಫೌಂಡೇಷನ್‌ನವರು ಮಧ್ಯಾಹ್ನದ ಬಿಸಿಯೂಟ ನೀಡುತ್ತಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿ 1 ರಿಂದ 10ನೇ ತರಗತಿಯ 2,26,089 ಮಕ್ಕಳಿಗೆ ವಾರದಲ್ಲಿ ಐದು ದಿನ ಏಲಕ್ಕಿ ಮತ್ತು ಚಾಕೋಲೇಟ್‌ ಸುಗಂಧ ಮಿಶ್ರಿತ ಹಾಲು ಪೂರೈಸಲಾಗುತ್ತಿದೆ. ಇದಕ್ಕಾಗಿ ಈ ಸಾಲಿಗೆ 8.47 ಕೋಟಿ ಅನುದಾನ ನಿಗದಿಪಡಿಸಿದ್ದು, ವೇತನಕ್ಕಾಗಿ 94 ಲಕ್ಷ ಹಾಗೂ ವೇತನೇತರ ಕಾರ್ಯಕ್ರಗಳಿಗಾಗಿ 79.53 ಕೋಟಿ ನಿಗದಿಪಡಿಸಿದೆ. 

Advertisement

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ವೇತನ ಪಾವತಿಗೆ ಸಹಾಯಾನುದಾನ ನೀಡಲು 12 ಲಕ್ಷ ರೂ. ಒದಗಿಸಿದೆ. ಆಂಗ್ಲೋ ಇಂಡಿಯನ್‌ ವಿದ್ಯಾರ್ಥಿಗಳನ್ನೊಳಗೊಂಡಂತೆ ಧನ ಸಹಾಯ ಮತ್ತು ಶುಲ್ಕ ಮರುಪಾವತಿ ಮತ್ತು ವಿದ್ಯಾವಿಕಾಸ ಕಾರ್ಯಕ್ರಮಗಳಿಗೆ 1.20 ಕೋಟಿ ರೂ. ಒದಗಿಸಿದೆ. ಇದರಲ್ಲಿ ಸರ್ಕಾರಿ ಪ್ರೌಢಶಾಲೆಗಳ ಒಟ್ಟು 63752 ಎಸ್‌ಸಿ, ಎಸ್‌ಟಿ , ಆರ್ಥಿಕವಾಗಿ ಹಿಂದುಳಿದ ಗಂಡು ಮಕ್ಕಳ ಮತ್ತು ಎಲ್ಲಾ ವರ್ಗದ ಹೆಣ್ಣು ಮಕ್ಕಳ ಎಸ್‌ಎಸ್‌ಎಲ್‌ಸಿ ಪಬ್ಲಿಕ್‌ ಪರೀಕ್ಷಾ ಶುಲ್ಕ ಮತ್ತು ಶಾಲಾ ಶುಲ್ಕ ಮರುಪಾವತಿ ಒದಗಿಸಲಾಗಿದೆ. 

ಪ್ರೌಢಶಾಲೆಗಳ ದುರಸ್ತಿ: ಸೇರ್ಪಡೆ ಮತ್ತು ಮಾರ್ಪಾಡು ಲೆಕ್ಕ ಶೀರ್ಷಿಕೆಯಡಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳ ದುರಸ್ತಿಗಾಗಿ 1.30 ಕೋಟಿ ರೂ. ಒದಗಿಸಲಾಗಿದೆ. ಸರ್ಕಾರಿ ಪ್ರೌಢಶಾಲೆಗಳ ಸಾರ್ವತ್ರಿಕ ಸಾಮಗ್ರಿ ಒದಗಿಸಲು 1.10 ಕೋಟಿ ರೂ. ಒದಗಿಸಿದೆ. ಶಾಲಾ ಮಾತೆಯರ ವೇತನ ಪಾವತಿಸಲು 5.50 ಕೋಟಿ ರೂ. ಒದಗಿಸಿದೆ. ಸಹಾಯಾನುದಾನಕ್ಕೆ ಒಳಪಟ್ಟಿರುವ ಖಾಸಗಿ ಪ್ರೌಢಶಾಲೆಗಳ ಶಿಕ್ಷಕರಿಗೆ ವೇತನ ಪಾವತಿಸಲು 4742 ಲಕ್ಷ ರೂ. ಒದಗಿಸಲಾಗಿದೆ. ಡಿಡಿಪಿಐ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು

ಮತ್ತು ನೌಕರರ ವೇತನ ಪಾವತಿಗಾಗಿ 7.61 ಕೋಟಿ, ವೇತನೇತರ ವೆಚ್ಚಕ್ಕಾಗಿ 15,81 ಕೋಟಿ ರೂ. ನಿಗದಿಪಡಿಸಿದೆ. ವಯಸ್ಕರ ಶಿಕ್ಷಣ ಇಲಾಖೆಗೆ ವೇತನಕ್ಕಾಗಿ 30 ಲಕ್ಷ ರೂ. ವೇತನೇತರ ವೆಚ್ಚಕ್ಕಾಗಿ 11.67 ಲಕ್ಷ ರೂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ವೇತನಕ್ಕೆ 16 ಲಕ್ಷ ರೂ. ವೇತನೇತರ ವೆಚ್ಚಕ್ಕಾಗಿ 2.13 ಕೋಟಿ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಜಿಲ್ಲೆಯ ಆಯ್ದ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಬಯಲು ಪ್ರದರ್ಶನ ಮಂದಿರ ನಿರ್ಮಾಣಕ್ಕಾಗಿ 34 ಲಕ್ಷ ರೂ. ಅನುದಾನ ನಿಗದಿಪಡಿಸಿದೆ.

ಆರೋಗ್ಯ ಕೇಂದ್ರ ದುರಸ್ತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ಸಾಲಿನಲ್ಲಿ ಆರೋಗ್ಯ ಕೇಂದ್ರಗಳ ದುರಸ್ತಿ ಕಾಮಗಾರಿಗೆ 1.35 ಕೋಟಿ ರೂ. ಅನುದಾನ ನಿಗದಿಪಡಿಸಿದ್ದು, ಜಿಪಂ ಕ್ಷೇತ್ರವಾರು ಆರೋಗ್ಯಕೇಂದ್ರಗಳ ದುರಸ್ತಿ ಮಾಹಿತಿಪಡೆದು ಕ್ರಮವಹಿಸುವಂತೆ ಹೇಳಲಾಗಿದೆ.
ಜಿಪಂ ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್‌, ಜಿಪಂ ಸಿಇಒ ಕೆ.ಜ್ಯೋತಿ ಉಪಸ್ಥಿತರಿದ್ದರು.

ಕ್ರಿಯಾ ಯೋಜನೆ ಬಳಿಕ ಕಾರ್ಯಕ್ರಮಗಳ ಜಾರಿ: ಆಯುಷ್‌ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಪಶುಪಾಲನೆ ಇಲಾಖೆ, ಮೀನುಗಾರಿಕೆ ಇಲಾಖೆ, ಸಾಮಾಜಿಕ ಅರಣ್ಯ, ಕೃಷಿ ಇಲಾಖೆ ಕಾರ್ಯಕ್ರಮಗಳು, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ, ಕೈಮಗ್ಗ ಮತ್ತು ಜವಳಿ ಇಲಾಖೆ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ಸಹಕಾರ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ,

ಜಿಪಂ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳು, ಸಚಿವಾಲಯ ಮತ್ತು ಆರ್ಥಿಕ ಸೇವೆಗಳು, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಮೈಸೂರು ಜಿಪಂನ ವಿವಿಧ ಕಾರ್ಯಕ್ರಮಗಳಿಗೆ ಒಟ್ಟಾರೆ 435,91 ಕೋಟಿ ಅನುದಾನ ನಿಗದಿಪಡಿಸಿದ್ದು,  ಈ ಅನುದಾನವನ್ನು 2019-20ನೇ ಸಾಲಿನಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಅನುಮೋದನೆ ನಂತರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ವೆಚ್ಚ ಭರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next