Advertisement

40 ಲಕ್ಷ ತೆರಿಗೆ ಕಟ್ಟಿ ಸಿಕ್ಕಿಬಿದ್ದ! 

01:14 PM Jan 30, 2018 | |

ಬೆಂಗಳೂರು: ಸೆಂಟ್ರಿಂಗ್‌ ಕೆಲಸ ಮಾಡುವ ಕಾರ್ಮಿಕನೊಬ್ಬ ಬರೋಬ್ಬರಿ 40 ಲಕ್ಷ ರೂ. ಆದಾಯ ತೆರಿಗೆ ಪಾವತಿಸಿ, ಜತೆಗೆ ಸಿಕ್ಕಿಬಿದ್ದಿದ್ದಾನೆ!
ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದ್ದರೂ ಕಾರ್ಮಿಕ ರಾಚಪ್ಪ ಸಿಕ್ಕಿಬಿದ್ದಿದ್ಯಾಕೆ ಎಂದು ಅಚ್ಚರಿಯೇ? ಹೌದು, ಇಲ್ಲೂ ಒಂದು ಆಸಕ್ತಿಕರ ವಿಚಾರವಿದೆ.

Advertisement

ಈ ಆಸಾಮಿ ಸೆಂಟ್ರಿಂಗ್‌ ಕೆಲಸ ಮಾಡಿ ಈ ಹಣ ದುಡಿದಿಲ್ಲ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಿ, ಐಶಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡಿ ಪೊಲೀಸರಿಗೆ ಸೆರೆ ಸಿಕ್ಕಿದ್ದಾನೆ. ಅಲ್ಲದೆ ಇದೇ ಅಪಾರ್ಟ್‌ಮೆಂಟ್‌ಗಾಗಿ 40 ಲಕ್ಷ ರೂ. ತೆರಿಗೆ ಪಾವತಿಸಿದ ಮೇಲೆಯೇ ಈತನ ಕೃತ್ಯದ ಮೇಲೆ ಅನುಮಾನ ಮೂಡಿದ್ದು. 

ಇಷ್ಟೆಲ್ಲಾ ಆದ ಮೇಲೆ ಕೋರಮಂಗಲ ಪೊಲೀಸರು ಕೊಳ್ಳೇಗಾಲದ ರಾಚಪ್ಪನ ಜತೆಗೆ, ಶ್ರೀನಿವಾಸ್‌ ಎಂಬಾತನನ್ನೂ ಬಂಧಿಸಿದ್ದಾರೆ. ಇವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಇನ್ನೋವಾ ಕಾರು, ಐದು ಲಕ್ಷ ನಗದು ಹಾಗೂ 30 ಕೆ.ಜಿ.ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕೊಳ್ಳೆಗಾಲದ ತಾಳಬೆಟ್ಟ ಎಂಬಲ್ಲಿ ಗಾಂಜಾ ಬೆಳೆಯುತ್ತಿದ್ದವರ ಬಳಿ ಮಾದಕ ವಸ್ತು ಖರೀದಿ ಮಾಡುತ್ತಿದ್ದ ಆರೋಪಿಗಳು ನಗರದಲ್ಲಿ ಕಟ್ಟಡಗಳ ಸೆಂಟ್ರಿಂಗ್‌ ಕೆಲಸ ಮಾಡುವ ಸೋಗಿನಲ್ಲಿ ಜೀವನ ನಡೆಸುತ್ತಿದ್ದರು. ಆದರೆ, ಐಷಾರಾಮಿ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಈ ಇಬ್ಬರೂ 40 ಲಕ್ಷ ರೂ. ಆದಾಯ ತೆರಿಗೆ ಪಾವತಿಸಿ ಸಿಕ್ಕಿ ಬಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರದ ಕೊಳ್ಳೆಗಾಲದವನಾದ ರಾಚಪ್ಪ, ಸುಮಾರು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದ. ಈ ಮಧ್ಯೆ ಕೊಳ್ಳೆಗಾಲದಲ್ಲಿ ರಹಸ್ಯವಾಗಿ ತಾಳಬೆಟ್ಟದಲ್ಲಿ ಗಾಂಜಾ ಬೆಳೆಗಾರರನ್ನು ಪರಿಚಯಿಸಿಕೊಂಡಿದ್ದ ಆರೋಪಿ, ತಾನು ಖರೀದಿಸಿದ್ದ ಇನ್ನೋವಾ ಕಾರಿನಲ್ಲಿ ನಗರಕ್ಕೆ ಗಾಂಜಾ ತರುತ್ತಿದ್ದ.

Advertisement

ಬಳಿಕ ವಿದ್ಯಾರ್ಥಿಗಳು ಹಾಗೂ ಯುವಸಮೂಹವನ್ನೆ ಗುರಿಯಾಗಿಸಿಕೊಂಡು ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣ-ಸಣ್ಣ ಪ್ಯಾಕೆಟ್‌ಗಳ ಮೂಲಕ ಮಾರಾಟ ಮಾಡುತ್ತಿದ್ದ. ಬಳಿಕ ಸ್ನೇಹಿತ ಶ್ರೀನಿವಾಸ್‌ ನೆರವು ಪಡೆದು ದಂಧೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ತೆರಿಗೆ ಕಟ್ಟಿ ಸಿಕ್ಕಿ ಬಿದ್ದ:ಕೆಲ ವರ್ಷಗಳಿಂದ ನಿರಂತರವಾಗಿ ದಂಧೆ ನಡೆಸುತ್ತಿರುವ ರಾಚಪ್ಪ ಕೋಟ್ಯಂತರ ರೂ. ಆಸ್ತಿ ಸಂಪಾದಿಸಿದ್ದಾನೆ. ಇದರಿಂದ ಐಷಾರಾಮಿ ಜೀವನ ನಡೆಸುತ್ತಿದ್ದು, ತಲ್ಲಘಟ್ಟಪುರದಲ್ಲಿ ಅಪಾರ್ಟ್‌ಮೆಂಟ್‌ ಹೊಂದಿದ್ದಾನೆ. ಇತ್ತೀಚೆಗೆ ತನ್ನ ಆದಾಯ ಹೆಚ್ಚಾದ್ದರಿಂದ 40 ಲಕ್ಷ ರೂ. ಆದಾಯ ತೆರಿಗೆ ಪಾವತಿಸಿದ್ದ.

ಆದರೆ, ಅರ್ಜಿಯಲ್ಲಿ ಸೆಂಟ್ರಿಂಗ್‌ ಕೆಲಸ ಮಾಡುವುದಾಗಿ ನಮೂದಿಸಿದ್ದ. ಇದರಿಂದ ಆಶ್ಚರ್ಯಗೊಂಡ ಅಧಿಕಾರಿಗಳು ಕೂಡಲೇ ಆದಾಯದ ಮೂಲ ತಿಳಿಸುವಂತೆ ರಾಚಪ್ಪನಿಗೆ ಪತ್ರ ಬರೆದಿದ್ದರು. ಪತ್ರ ಕಂಡು ಹೆದರಿದ ಆರೋಪಿ ಪ್ರಥಮ ದರ್ಜೆ ಗುತ್ತಿಗೆದಾರನ ಪರವಾನಿಗೆ ಸೃಷ್ಠಿಸಿ ಇಲಾಖೆಗೆ ದಾಖಲೆ ಸಲ್ಲಿಸಿದ್ದಾನೆ. ಇದರಿಂದ ಅನುಮಾನಗೊಂಡ ಐಟಿ ಅಧಿಕಾರಿಗಳು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಪೊಲೀಸರು, ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಗಾಂಜಾ ಮಾರಾಟ ದಂಧೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next