ಬೆಂಗಳೂರು: ರಾಜ್ಯದ ಆರ್ಥಿಕ ಬೆಳವಣಿಗೆಯ ಗುರಿ ಹಾಗೂ ಕಾರ್ಯ ಸಾಧನೆಗಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ಎಲ್ಲ ವಲಯಗಳಿಗೂ ಆರ್ಥಿಕ ಕೊಡುಗೆ ನೀಡಿರುವ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್‌ಎಫ್‌ಸಿ) 2016-17ನೇ ವಿತ್ತ ವರ್ಷದಲ್ಲಿ 30 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ 58ನೇ ವಾರ್ಷಿಕ ಮಹಾ ಸಭೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಡಾ. ಏಕರೂಪ್ ಕೌರ್ ಅವರು ಮಾತನಾಡಿ, ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ
ಕೈಗಾರಿಕಾ ಮತ್ತು ಸೇವಾ ಕ್ಷೇತ್ರದ ವಲಯಗಳ ಘಟಕಗಳಿಗೆ ಹಣಕಾಸಿನ ನೆರವು ನೀಡುವುದರಲ್ಲಿ ಮೊದಲ ಹಣಕಾಸು ಸಂಸ್ಥೆ ನಮ್ಮದು. ಕೆಎಸ್ ಎಫ್‌ಸಿ ಹಿಂದಿನ ಹಣಕಾಸು ವರ್ಷಕ್ಕಿಂತ ಈ ಸಾಲಿನಲ್ಲಿ ಗಣನೀಯ ಸಾಧನೆ ಮಾಡಿದೆ.
2015-16ರಲ್ಲಿ ಸಾಲ ವಿತರಣೆ 566.36 ಕೋಟಿ ರೂ. ಇದ್ದದ್ದು ಈ ಸಾಲಿನಲ್ಲಿ ಅದರ ಪ್ರಮಾಣ 614.38 ಕೋಟಿಗೇರಿದೆ. ಒಟ್ಟು ಸಾಲ ಮಾರ್ಚ್ ಅಂತ್ಯಕ್ಕೆ 12001.86 ಕೋಟಿ ರೂ.ಗಳಾಗಿದೆ. ಇದೇ ರೀತಿ ಸಾಲ ವಸೂಲಾತಿಯಲ್ಲೂ ಕಳೆದ ಸಾಲಿಗಿಂತ 43.63 ಕೋಟಿ ರೂ. ಹೆಚ್ಚಳವಾಗಿದೆ ಎಂದರು.
ಆರ್ಥಿಕ ವರ್ಷದಲ್ಲಿ ಒಟ್ಟು 733.43 ಕೋಟಿ ರೂ. ಮಂಜೂರಾಗಿತ್ತು. ಅದರಲ್ಲಿ ಉತ್ಪಾದನಾ ವಲಯಕ್ಕೆ 309.22
ಕೋಟಿ ರೂ., ಪ್ರವಾಸೋದ್ಯಮ ವಲಯಕ್ಕೆ 77.31 ಕೋಟಿ ರೂ. ಹಾಗೂ ರಿಯಲ್ ಎಸ್ಟೇಟ್ ವಾಣಿಜ್ಯ ವಲಯಕ್ಕೆ 58.92 ಕೋಟಿ ರೂ. ಹಣಕಾಸಿನ ನೆರವನ್ನು ನೀಡಲಾಗಿದ್ದು ಒಟ್ಟು ಮಂಜೂರಾತಿಯಲ್ಲಿ ಪ್ರತಿ ವಲಯದ ಪಾಲು ಶೇ.11 ಹಾಗೂ ಶೇ.8 ರಷ್ಟಿದೆ. ಉಳಿದ 37.39 ಕೋಟಿ ಮತ್ತು 250.59 ಕೋಟಿ ರೂ.ಗಳನ್ನು ಆರೋಗ್ಯ ಹಾಗೂ ಇತರೆ ವಲಯಗಳಿಗೆ ವಿತರಿಸಿದೆ.
Related Articles
ಹಣಕಾಸು ವರ್ಷಾಂತ್ಯಕ್ಕೆ ಸಂಸ್ಥೆ ಮಂಜೂರಾತಿ 880 ಕೋಟಿ ರೂ., ವಿತರಣೆ 700 ಕೋಟಿ ಹಾಗೂ ವಸೂಲಾತಿಯನ್ನು 740 ಕೋಟಿಗೇರಿಸುವ ಗುರಿಯನ್ನು ಸಂಸ್ಥೆ ಹೊಂದಿದೆ ಎಂದು ಅವರು ಹೇಳಿದರು.