Advertisement
ಪ್ರಧಾನಿ ನರೇಂದ್ರ ಮೋದಿಯವರು ರೈತರು ಸರಾಗವಾಗಿ ಯೂರಿಯ ಪಡೆಯಬೇಕು, ಕೃಷಿ ಚಟುವಟಿಕೆಗಳು ಸುಸ್ಥಿರವಾಗಿ ಮುಂದುವರಿಯಬೇಕೆಂದು ಬಯಸಿದ್ದಾರೆ. ಅದಕ್ಕಾಗಿ ಭಾರೀ ಮೊತ್ತವನ್ನು ನೀಡಿದ್ದಾರೆ. 3.70 ಲಕ್ಷ ಕೋಟಿ ರೂ.ಗಳಲ್ಲಿ 3.68 ಲಕ್ಷ ಕೋಟಿ ರೂ.ಗಳನ್ನು ಯೂರಿಯ ಸಬ್ಸಿಡಿಗೆಂದೇ ಎತ್ತಿಡಲಾಗಿದೆ. ಇದರಿಂದ 45 ಕೆ.ಜಿ.ಗಳ ಒಂದು ಯೂರಿಯ ಚೀಲ 242 ರೂ.ಗಳಿಗೇ ಸಿಗಲಿದೆ ಎಂದು ಮಾಂಡವಿಯಾ ಹೇಳಿದ್ದಾರೆ. ಪ್ರಸ್ತುತ ದೇಶದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಹೀಗಾಗಿ ರೈತರು ತಮ್ಮ ಚಟುವಟಿಕೆಯನ್ನು ಬಿರುಸುಗೊಳಿಸಲಿದ್ದಾರೆ. ಹೀಗಾಗಿ ಈ ಹಣ ಬಿಡುಗಡೆ ಮಹತ್ವ ಪಡೆದುಕೊಂಡಿದೆ.
“ಪಿಎಂ-ಪ್ರಣಾಮ್” ನೂತನ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಯೋಜನೆಯು ರಾಜ್ಯಗಳಲ್ಲಿ ರಾಸಾಯನಿಕ ಗೊಬ್ಬರಗಳಿಗೆ ಕಡಿವಾಣ ಹಾಕಿ, ಪರ್ಯಾಯ ರಸಗೊಬ್ಬರಗಳ ಬಳಕೆಗೆ ಉತ್ತೇಜನ ನೀಡುತ್ತದೆ. 2023-24ರ ಕೇಂದ್ರ ಬಜೆಟ್‌ನ ಭಾಗವಾಗಿ ಪಿಎಂ-ಪ್ರಣಾಮ್(ಭೂಮಿ ತಾಯಿಯ ಪುನಃಸ್ಥಾಪನೆ, ಜಾಗೃತಿ, ಉತ್ಪಾದನೆ, ಪೋಷಣೆ ಮತ್ತು ಸುಧಾರಣೆಗಾಗಿ ಪ್ರಧಾನಮಂತ್ರಿ ಕಾರ್ಯಕ್ರಮ) ಯೋಜನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆ.1ರಂದು ಘೋಷಿಸಿದ್ದರು. “ಒಂದು ರಾಜ್ಯ 10 ಲಕ್ಷ ಟನ್ ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದು, ಅದನ್ನು 3 ಲಕ್ಷ ಟನ್‌ಗೆ ಇಳಿಸಿದರೆ, ಅದರ ಸಬ್ಸಿಡಿ ಉಳಿತಾಯ 3,000 ಕೋಟಿ ರೂ. ಆಗಲಿದೆ. ಈ ಪೈಕಿ ಶೇ.50ರಷ್ಟು ಅಂದರೆ 1,500 ಕೋಟಿ ರೂ.ಗಳನ್ನು ಕೇಂದ್ರ ಸರಕಾರ ಸಂಬಂಧಪಟ್ಟ ರಾಜ್ಯಕ್ಕೆ ನೀಡಲಿದೆ. ಇದನ್ನು ಪರ್ಯಾಯ ಗೊಬ್ಬರ ಮತ್ತು ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು” ಎಂದು ಮಾಂಡವಿಯಾ ತಿಳಿಸಿದ್ದಾರೆ.