Advertisement

ಬಂಡಾಯ ಶಮನಕ್ಕೆ 3.5 ಕೋಟಿ ರೂ.ಡೀಲ್‌?

11:37 PM Apr 28, 2019 | Lakshmi GovindaRaju |

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಸಂಸದ ಎಸ್‌.ಪಿ.ಮುದ್ದಹನುಮೇಗೌಡ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಕಣದಿಂದ ಹಿಂದೆ ಸರಿಯಲು ಮೂರೂವರೆ ಕೋಟಿ ರೂ.ಪಡೆದಿದ್ದಾರೆ ಎನ್ನುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ರಾಜಕೀಯ ರಂಗದಲ್ಲಿ ಬೀರುಗಾಳಿ ಎಬ್ಬಿಸಿದೆ.

Advertisement

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಪರಮಾಪ್ತ ಶಿಷ್ಯ ಮತ್ತು ಕಾಂಗ್ರೆಸ್‌ ಪಕ್ಷದ ತುಮಕೂರು ಸಾಮಾಜಿಕ ಜಾಲತಾಣದ ಸಂಚಾಲಕ ದರ್ಶನ್‌ ಎಂಬುವರು ಮತ್ತೂಬ್ಬ ಕಾಂಗ್ರೆಸ್‌ ಕಾರ್ಯಕರ್ತನ ಜತೆಗೆ ಮಾತನಾಡಿರುವ ಈ ಆಡಿಯೋ ಈಗ ವೈರಲ್‌ ಆಗಿದೆ.

ತುಮಕೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸುವುದು ಖಚಿತ ಎನ್ನುವ ಮಾಹಿತಿ ಬರುತ್ತಲೇ ಇವರು ಬಂಡಾಯದ ಬಾವುಟ ಹಾರಿಸಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ, ಪಕ್ಷದ ವರಿಷ್ಠರ ಮಾತಿಗೆ ಕಟ್ಟು ಬಿದ್ದು, ನಾಮಪತ್ರ ವಾಪಸ್‌ ಪಡೆದಿದ್ದರು.

ಇವರು ಕಣದಿಂದ ಹಿಂದಕ್ಕೆ ಸರಿಯಲು ಮೂರೂವರೆ ಕೋಟಿ ರೂ.ಪಡೆದಿದ್ದಾರೆ. ಆದರೂ, ಗೌಡರ ಪರ ಅವರು ಪ್ರಚಾರ ಮಾಡಲಿಲ್ಲ. ದೇವೇಗೌಡರು ಗೆದ್ದ ನಂತರ ಪರಮೇಶ್ವರ್‌ ಸಿಎಂ ಆಗುತ್ತಾರೆ. ಎಚ್‌.ಡಿ.ರೇವಣ್ಣ ಉಪಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಮಾತುಗಳು ಈ ಆಡಿಯೋದಲ್ಲಿವೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಸೆಲ್ಫಿ ವಿಡಿಯೋ ಹರಿಬಿಟ್ಟು ಸ್ಪಷ್ಟನೆ ನೀಡಿರುವ ದರ್ಶನ್‌, ಕಾರ್ಯಕರ್ತರು ಹೀಗೆ ಮಾತನಾಡಿರಬಹುದು ಎಂದು ಗೆಳೆಯನ ಬಳಿ ಹೇಳಿದ್ದೇನೆ ಅಷ್ಟೆ. ಆದರೆ, ಯಾರೂ ಹಣ ಪಡೆದಿಲ್ಲ. ಇದೊಂದು ಕುತಂತ್ರ ಎಂದಿದ್ದಾರೆ.

Advertisement

ಈ ಮಧ್ಯೆ, ಸುದ್ದಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕನಾಗಿದ್ದ ದರ್ಶನ್‌ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ದರ್ಶನ್‌ ಎಂಬಾತ ಯಾರು ಎನ್ನುವ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಪಕ್ಷದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಹೇಳಿಕೆ ನೀಡಿದ್ದರೆ ಪ್ರತಿಕ್ರಿಯೆ ನೀಡಬಹುದು. ಅವನು ಯಾರೋ, ಎಲ್ಲಿಯೋ ಮಾತನಾಡಿದ್ದನ್ನೇ ವೈಭವಿಕರಿಸುವುದು ಸರಿ ಕಾಣುವುದಿಲ್ಲ.
-ಎಸ್‌.ಆರ್‌.ಶ್ರೀನಿವಾಸ್‌, ಸಣ್ಣ ಕೈಗಾರಿಕಾ ಸಚಿವ.

ಮಧುಗಿರಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪರಮೇಶ್ವರ್‌, ಸಿದ್ದು, ದೇವೇಗೌಡರ ಸಮ್ಮುಖದಲ್ಲಿ, ಮಧುಗಿರಿ ದಂಡಿನ ಮಾರಮ್ಮನ ಸನ್ನಿಧಾನದಲ್ಲಿಯೇ ನಾವು ಯಾವುದೇ ಡೀಲ್‌ಗೆ ಒಳಗಾಗಿ ನಾಮಪತ್ರ ವಾಪಸ್‌ ಪಡೆದಿಲ್ಲ ಎಂದು ಹೇಳಿದ್ದೇನೆ. ಈಗ ಇಂತಹ ಚಿಲ್ಲರೆ ವಿಷಯಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಯಾರು ಎಂಬುದು ಜನರಿಗೆ ಗೊತ್ತಿದೆ.
-ಎಸ್‌.ಪಿ.ಮುದ್ದಹನುಮೇಗೌಡ.

ಮುದ್ದಹನುಮೇಗೌಡ, ರಾಜಣ್ಣ ಅಂತವರಲ್ಲ. ಬಹಳ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದು, ಸ್ಥಾನಮಾನ ಗಳಿಸಿದ್ದಾರೆ. ದರ್ಶನ್‌ ಎನ್ನುವ ಹುಡುಗ ನನ್ನ ಜತೆಗೆ ಓಡಾಡುತ್ತಿದ್ದ ಅಷ್ಟೇ. ಯಾವುದೇ ಪುರಾವೆಯಿಲ್ಲದೆ ಇಂತಹ ಆರೋಪ, ಗೊಂದಲ ಸೃಷ್ಟಿಸುವುದು ಸರಿಯಲ್ಲ. ದರ್ಶನ್‌ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಪರಮೇಶ್ವರ್‌, ಉಪಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next