ಬೆಂಗಳೂರು: ಕಾಮಗಾರಿ ನಡೆಸದೆ ಹಣ ಬಿಡುಗಡೆಗೊಳಿಸಿದ ಕಾರಣಕ್ಕಾಗಿ ಲೆಕ್ಕಪರಿಶೋಧನೆಯಲ್ಲಿ ನಮೂದಿಸಿರುವ 26.18 ಕೋಟಿ ರೂ. ವಸೂಲಿಗೆ ಕ್ರಮಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಆದೇಶಿಸಿದ್ದು, ಅಕ್ರಮ ನಡೆಸಿದ ಆರೋಪವಿರುವ ಪ್ರಥಮ ದರ್ಜೆ ಗುಮಾಸ್ತ ಮಾಯಣ್ಣರನ್ನು ಬೇರೊಂದು ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ರಸ್ತೆ ಹಾಗೂ ಮೂಲಸೌಕರ್ಯ ವಿಭಾಗದಲ್ಲಿ 2012-13ರಿಂದ 201-15ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ 109.68 ಕೋಟಿ ರೂ.ಗೆ ಆಕ್ಷೇಪಣೆ ವ್ಯಕ್ತವಾಗಿದ್ದು, ಕಾಮಗಾರಿ ನಡೆಸದೆಯೇ 26.18 ಕೋಟಿ ರೂ. ಬಿಡುಗಡೆಗೊಳಿಸಿದ ಸಂಬಂಧ ಆರು ವಾರಗಳಲ್ಲಿ ತನಿಖೆ ನಡೆಸಿ, ಹಣ ವಸೂಲಿ ಮಾಡಲು ಕ್ರಮಕೈಗೊಳ್ಳುವಂತೆ ಲೆಕ್ಕಪರಿಶೋಧಕರು ತಿಳಿಸಿದ್ದಾರೆ.
ಈ ಕುರಿತು ರಾಬರ್ಟ್ ಎಂಬವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿತ್ತು. ಅದರಂತೆ ತನಿಖೆ ನಡೆಸಿರುವ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ನೀಡಿರುವ ಮಧ್ಯಂತರ ವರದಿಯಿಂದ ಪಾಲಿಕೆಯ ರಸ್ತೆ ಹಾಗೂ ಮೂಲಸೌಕರ್ಯ ವಿಭಾಗದಲ್ಲಿನ 109.68 ಕೋಟಿ ಆಕ್ಷೇಪಣೆ ಹಾಗೂ ಮಾಯಣ್ಣ ಮೇಲಿನ ಅಕ್ರಮದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿದ್ದು, ಅಗತ್ಯ ತನಿಖೆ ನಡೆಸಿ ಹಣ ವಸೂಲಿಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಆಯುಕ್ತರಿಗೆ ಆದೇಶಿಸಲಾಗಿದೆ.
200 ಕೋಟಿ ಅವ್ಯವಹಾರ: ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿರುವ ರಾಬರ್ಟ್ ಅವರು, ರಸ್ತೆ ಮೂಲಸೌಕರ್ಯ ವಿಭಾಗದಲ್ಲಿನ ಪ್ರಥಮ ದರ್ಜೆ ಗುಮಾಸ್ತ ಮಾಯಣ್ಣ ಹಾಗೂ ಮುಖ್ಯ ಲೆಕ್ಕಾಧಿಕಾರಿಯಾಗಿದ್ದ ನಾಗರಾಜ್, ನಡೆಯದೇ ಇರುವ ಕಾಮಗಾರಿಗಳಿಗೆ ನಕಲಿ ಬಿಲ್‌ಗಳನ್ನು ಪಡೆದಿದ್ದು, ಸುಮಾರು 200 ಕೋಟಿ ರೂ. ಅಕ್ರಮ ನಡೆಸಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಜತೆಗೆ ಪಾಲಿಕೆಯ ಎಂಟು ವಲಯಗಳಿಗೆ ಮಾಯಣ್ಣ ಒಬ್ಬರೇ ಗುಮಾಸ್ತರಾಗಿದ್ದು, ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿದರೆ ಅಥವಾ ಅವರ ಜಾಗಕ್ಕೆ ಬೇರೆಯವರನ್ನು ನಿಯೋಜಿಸಿದರೆ ಪ್ರಭಾವಿಗಳಿಂದ ಒತ್ತಡ ತರುತ್ತಿದ್ದಾರೆ. ಜತೆಗೆ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಆ ಸ್ಥಾನಕ್ಕೆ ಬರದಂತೆ ಮಾಡುತ್ತಿದ್ದಾರೆ ಎಂಬ ಅಂಶಗಳನ್ನು ದೂರಿನಲ್ಲಿ ಉಲ್ಲೇಖೀಸಿದ್ದಾರೆ.
ಆ ಹಿನ್ನೆಲೆಯಲ್ಲಿ ಹೈಕೋರ್ಟ್ ತನಿಖೆ ನಡೆಸುವಂತೆ ನಗರಾಭಿವೃದ್ಧಿ ಇಲಾಖೆಗೆ ಸೂಚಿಸಿತ್ತು. ಅದರಂತೆ ಸಂಪೂರ್ಣ ತನಿಖೆ ನಡೆಸಲು ನಗರಾಭಿವೃದ್ಧಿ ಇಲಾಖೆಯಿಂದ ನೇಮಿಸಿದ್ದ ಮೂವರು ಲೆಕ್ಕಪರಿಶೋಧಕರು, ಮಧ್ಯಂತರ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮಹೇಂದ್ರ ಜೈನ್ ಆದೇಶ ಹೊರಡಿಸಿದ್ದು, ಆರು ವಾರಗಳಲ್ಲಿ ತನಿಖೆ ನಡೆಸಿ ಹಣ ವಸೂಲಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಹಾಗೂ ವಿಚಾರಣೆ ವೇಳೆ ಮಾಯಣ್ಣರನ್ನು ಬೇರೊಂದು ವಿಭಾಗಕ್ಕೆ ವರ್ಗಾವಣೆ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯಿಂದ ಹೊರಡಿಸಿರುವ ಆದೇಶ ಪರಿಶೀಲಿಸಿ, ಅದರಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು. ತನಿಖೆಯ ವೇಳೆ ಆರೋಪ ಎದುರಿಸುತ್ತಿರುವ ಪ್ರಥಮ ದರ್ಜೆ ಗುಮಾಸ್ತನನ್ನು ಬೇರೊಂದು ವಿಭಾಗಕ್ಕೆ ವರ್ಗಾವಣೆ ಮಾಡಲಾಗುವುದು.
-ಎನ್.ಮಂಜುನಾಥ ಪ್ರಸಾದ್, ಬಿಬಿಎಂಪಿ ಆಯುಕ್ತ