ಧಾರವಾಡ: ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ 25 ಲಕ್ಷ ರೂ.ಗಳ ಅನುದಾನವನ್ನು ಮೇಯರ್ ಮಂಜುಳಾ ಅಕ್ಕೂರ್ ಘೋಷಿಸಿ ಆದೇಶ ನೀಡಿದ್ದಾರೆ. ನಗರದಲ್ಲಿ ಮಂಗಳವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯರ ಒತ್ತಡಕ್ಕೆ ಮಣಿದ ಮೇಯರ್,ಸಾಮಾನ್ಯ ಅನುದಾನದಡಿ ಪ್ರತಿ ವಾರ್ಡ್‌ಗೆ 25 ಲಕ್ಷ ರೂ.ಗಳ ಅನುದಾನ ಘೋಷಿಸಿದರು.
ಇದಕ್ಕೂ ಮುನ್ನ ಪಾಲಿಕೆ ಸದಸ್ಯ ದೀಪಕ್ ಚಿಂಚೋರೆ ಹಾಗೂ ಗಣೇಶ ಟಗರಗುಂಟಿ ಮಾತನಾಡಿ, ಪಾಲಿಕೆ ಆಯುಕ್ತರು ನಿರೀಕ್ಷೆಗೂ ಮೀರಿ ಕರ ಸಂಗ್ರಹಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಆಗಿದ್ದು, ಇದೀಗ ವಾರ್ಡ್‌ಗಳ ಅಭಿವೃದ್ಧಿಗಾಗಿ ಮೇಯರ್ ಅನುದಾನ ಘೋಷಣೆ ಮಾಡದ ಹೊರತು ಸಭೆಯಲ್ಲಿ ಮುಂದಿನ ಚರ್ಚೆ ಅಸಾಧ್ಯ ಎಂದು ಪಟ್ಟು ಹಿಡಿದರು.
ಈ ಚರ್ಚೆಗೆ ಸಾಥ್ ನೀಡಿದ ಪಾಂಡುರಂಗ ಪಾಟೀಲ ಪಾಲಿಕೆ ಆಯುಕ್ತರಿಂದ ಫಂಡ್ ಬೇಸ್ ಅಕೌಂಟ್ಸ್ ಬಗ್ಗೆ ಮಾಹಿತಿ ಪಡೆದು, ಪಾಲಿಕೆ ಆಯುಕ್ತರ ಉತ್ತರಗಳಲ್ಲಿ ಅವರನ್ನೇ ಸಿಲುಕಿಸಿದರು. ಈ ಹಿಂದೆ ಮಾಡಿದ್ದು ಸರಿಯಾಗಿದ್ದರೆ ಈಗಲೂ ವಾರ್ಡ್‌ಗಳಿಗೆ ಅನುದಾನ ಘೋಷಣೆ ಮಾಡೋದು ಸರಿಯೇ…ಇದು ತಪ್ಪಾದರೆ ಹಿಂದೆ ಮಾಡಿದ್ದು ಕೂಡಾ ತಪ್ಪು..ಹೀಗಾಗಿ ಅನುದಾನ ಘೋಷಣೆ ಮಾಡುವಂತೆ ಆಗ್ರಹಿಸಿದರು.
ಅನುದಾನ ಘೋಷಣೆಯಾಗಿ ಐದಾರು ತಿಂಗಳಿಗೆ ಕೆಲಸ ಪ್ರಾರಂಭವಾಗುತ್ತಿದ್ದು, ಮೇಯರ್ ಅವರು ಪ್ರತಿ ವಾರ್ಡ್‌ಗೆ 25 ಲಕ್ಷ ಅನುದಾನ ಘೋಷಿಸಿದರೆ ಮುಂದಿನ ಐದಾರು ತಿಂಗಳಿಗೆ ಈ ಹಣ ವಾರ್ಡ್‌ಗೆ ತಲುಪಲಿದೆ ಎಂದರು. ಆಗ ಆಯುಕ್ತರು ಸಾಮಾನ್ಯ ಅನುದಾನವನ್ನು ಈಗಾಗಲೇ 64 ಕೋಟಿ ನೀಡಿದ್ದು, ಅದರ ಮಿತಿ ಮುಗಿದಿದೆ ಎಂದರು.
ಎದ್ದು ನಿಂತ ಬಿಜೆಪಿ ಹಿರಿಯ ಸದಸ್ಯ ಡಾ| ಪಾಂಡುರಂಗ ಪಾಟೀಲ, ಪಾಲಿಕೆ ಇಷ್ಟು ದಿನ ಸಾಮಾನ್ಯ ಅನುದಾನಕ್ಕೆ ಬೇರೆ-ಬೇರೆ ಮೂಲಗಳ ಅನುದಾನ ಬಳಸಿದ್ದು, ಅದೇ ರೀತಿ ಈಗಲೂ ಪ್ರತಿ ವಾರ್ಡ್‌ಗೆ 25ಲಕ್ಷ ನೀಡಿ ಎಂದು ಸಲಹೆ ನೀಡಿದರು. ಇದಕ್ಕೆ ಸಾಥ್ ನೀಡಿದ ಸದಸ್ಯರೆಲ್ಲ ಎದ್ದು ನಿಂತು ಅನುದಾನ ಘೋಷಣೆ ಮಾಡದ ಹೊರತು ಮುಂದಿನ ಚರ್ಚೆಗೆ ಅವಕಾಶ ನೀಡಲಾಗದು ಎಂದು ಪಟ್ಟು ಹಿಡಿದರು.
ಕೊನೆಗೆ ಇದಕ್ಕೆ ಮಣಿದ ಮೇಯರ್, ಪ್ರತಿ ವಾರ್ಡ್‌ಗೆ 25 ಲಕ್ಷ ರೂ.ಗಳ ಅನುದಾನ ಘೋಷಣೆ ಮಾಡಿದರು. ಪಾಲಿಕೆಗೆ ಬಂದಿರುವ 3 ವಿಶೇಷ 100 ಕೋಟಿ ಅನುದಾನ ಪೈಕಿ ಕೈಗೊಳ್ಳಬೇಕಿರುವ ಕಾಮಗಾರಿಗಳ ವಿಳಂಬ ಬಗ್ಗೆ ಕೆಲವು ಸದಸ್ಯರು ಪ್ರಶ್ನಿಸಿದರು. ತಾಂತ್ರಿಕ ದೋಷಗಳ ನೆಪದಲ್ಲಿ ವಿಳಂಬ ಸರಿಯಲ್ಲ. ಇದರಿಂದ ಜನರಿಂದ ನಾವು ಬೈಯಿಸಿಕೊಳ್ಳುತ್ತಿದ್ದೇವೆ. ಅದರಲ್ಲೂ ಹಿರಿಯ ಸದಸ್ಯರ ವಾರ್ಡ್‌ಗಳಲ್ಲೇ ಕಾಮಗಾರಿಗಳು ಸರಿಯಾಗಿ ಆರಂಭಗೊಂಡಿಲ್ಲ.
ಇನ್ನೂ ಈಗಷ್ಟೇ ಹೊಸದಾಗಿ ಬಂದಿರುವ ಸದಸ್ಯರ ಪಾಡಂತೂ ಹೇಳತೀರದು. ಹೀಗಾಗಿ ಫೆ.11ರೊಳಗೆ ಎಲ್ಲ ಕಾಮಗಾರಿಗಳ ಆರಂಭಕ್ಕೆ ಸಮಯ ನಿಗದಿಗೊಳಿಸಿ ಸೂಚನೆ ನೀಡಿದರು. 100 ಕೋಟಿ ವಿಶೇಷ ಅನುದಾನ ನೀಡಿದ ಸರ್ಕಾರ ಹಲವು ಮಾರ್ಗದರ್ಶಿಗಳನ್ನು ರೂಪಿಸಿದೆ. ಅಲ್ಲದೇ, ಸರ್ಕಾರದ ಮೇಲ್ವಿಚಾರಣೆ ಮೇಲೆಯೇ ಈ ಕೆಲಸಗಳು ನಡೆಯಬೇಕಾದ ಕಾರಣ ತಡವಾಗಿದೆ. ಫೆ.10ರ ವರೆಗೆ ವರ್ಕ್ ಆರ್ಡರ್ ಕೊಡಲಿದ್ದೇವೆ ಎಂದು ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಸ್ಪಷ್ಟಪಡಿಸಿದರು.