ಬೆಂಗಳೂರು: ನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನಲ್ಲಿ (ಕಿಮ್ಸ್) ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ, ಹರ್ಯಾಣ ಮೂಲದ ವ್ಯಕ್ತಿ ಒಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮಗನಿಗೆ ಮೆಡಿಕಲ್ ಸೀಟು ಸಿಗುತ್ತದೆ ಎಂಬ ಆಸೆಯಿಂದ ಹಣ ಕೊಟ್ಟು ವಂಚನೆಗೊಳಗಾದ ಕ್ರಿಶನ್ ಪಾಲ್ ಎಂಬುವರು ವಿಷನ್ ಎಂಟರ್‌ಪ್ರೈಸಸ್ ಹೆಸರಿನ ಸಂಸ್ಥೆಯ ಸಿಬ್ಬಂದಿ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತೆ ದೆಹಲಿ ಮೂಲದ ವಿಷನ್ ಎಂಟರ್‌ಪ್ರೈಸಸ್‌ನ ಸಿಬ್ಬಂದಿ ಭೂಪೇಂದ್ರ ಸಿಂಗ್, ರಾಹುಲ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.
ಹರ್ಯಾಣದ ಕರ್ನಾಲ್ ನಿವಾಸಿಯಾಗಿರುವ ಉದ್ಯಮಿ ಕ್ರಿಶನ್ ಪಾಲ್‌ಗೆ ಕೆಲ ದಿನಗಳ ಹಿಂದೆ ದೂರವಾಣಿ ಕರೆ ಮಾಡಿದ್ದ ಭೂಪೇಂದ್ರ ಸಿಂಗ್, ನಿಮ್ಮ ಮಗ ಆದಿತ್ಯ ಚೌಹಾಣ್‌ಗೆ ಬೆಂಗಳೂರಿನ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಕೊಡಿಸುತ್ತೇವೆ. ಹೀಗಾಗಿ ದಾಖಲೆಗಳನ್ನು ಮೇಲ್ ಮಾಡಿ ಎಂದು ಹೇಳಿ ದಾಖಲೆಗಳನ್ನು ತರಿಸಿಕೊಂಡಿದ್ದ. ಬಳಿಕ ಆದಿತ್ಯ ಚೌಹಾಣ್ ಪಿಯುಸಿ ಹಾಗೂ ನೀಟ್‌ನಲ್ಲಿ ಉತ್ತಮ ಅಂಕ ಪಡೆದಿದ್ದು, ಸೀಟು ಸಿಗಲಿದೆ ಎಂದು ನಂಬಿಸಿದ್ದ.
ಕೆಲ ದಿನಗಳ ಬಳಿಕ ಮತ್ತೆ ಕ್ರಿಶನ್ ಪಾಲ್‌ರನ್ನು ಸಂಪರ್ಕಿಸಿದ ಭೂಪೇಂದ್ರ ಸಿಂಗ್, ಸೀಟು ಕೊಡಿಸುವ ಪ್ರಕ್ರಿಯೆ ಮುಂದುವರಿಸಲು ಆರಂಭಿಕವಾಗಿ 1.50 ಲಕ್ಷ ರೂ. ಚೆಕ್‌ಅನ್ನು ಕಂಪನಿ ಹೆಸರಿಗೆ ಕಳಿಸುವಂತೆ ತಿಳಿಸಿದ್ದ. ಅದರಂತೆ ಕ್ರಿಶನ್ ಪಾಲ್ ಚೆಕ್ ಕಳುಹಿಸಿದ್ದರು.
ನಂತರ ಮಗನಿಗೆ ಸೀಟು ಖಾತರಿಯಾಗಿದೆ ಎಂದು ಹೇಳಿ ಆಗಸ್ಟ್ 13ರಂದು ಕ್ರಿಶನ್‌ಪಾಲ್‌ರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ಭೂಪೇಂದ್ರ ಸಿಂಗ್ ಮತ್ತು ರಾಹುಲ್ ಎಂಬುವರು ಎಂ.ಜಿ.ರಸ್ತೆಯಲ್ಲಿರುವ ಬಾರ್ಟನ್ ಕಾಫಿ ಡೇಯಲ್ಲಿ 20 ಲಕ್ಷ ರೂ. ಪಡೆದುಕೊಂಡು, ಕೆಲ ಸಮಯದ ಬಳಿಕ ಕರೆ ಮಾಡುವುದಾಗಿ ಹೇಳಿ ಅಲ್ಲಿಂದ ತೆರಳಿದ್ದರು.
ಇಡೀ ದಿನ ಕಾದರೂ ಅವರಿಬ್ಬರು ಮತ್ತೆ ಬಾರದೇ ಇರುವುದು ಮತ್ತು ದೂರವಾಣಿ ಕರೆಯನ್ನು ಮಾಡದ ಕಾರಣ ಅನುಮಾನಗೊಂಡ ಕ್ರಿಶನ್ ಪಾಲ್, ವಂಚಕರ ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಹೀಗಾಗಿ ತಾವು ವಂಚನೆಗೆ ಒಳಗಾಗಿರುವುದನ್ನು ಅರಿತ ನಂತರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ರಿಶನ್ ಪಾಲ್ ನೀಡಿದ ದೂರು ಮತ್ತು ಆರೋಪಿಗಳ ಮೇಲ್ ಐಡಿ ಸೇರಿದಂತೆ ಇನ್ನಿತರೆ ದಾಖಲೆಗಳನ್ನು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.