ಬೆಂಗಳೂರು: ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಬೆಂಗಳೂರು ನಗರ ಜಿಲ್ಲಾಡಳಿತ ಮಂಗಳವಾರ ಬೆಂಗಳೂರು ದಕ್ಷಿಣ ತಾಲೂಕಿನ ಸಾರಕ್ಕಿ ಹೋಬಳಿಯ ಸಾರಕ್ಕಿ ಕೆರೆ ಅಂಗಳ ಸರ್ವೆ ನಂ.1ರಲ್ಲಿ ಸುಮಾರು 200 ಕೋಟಿ 4.20 ಎಕರೆ ಜಾಗವನ್ನು ವಶಕ್ಕೆ ಪಡೆದಿದ್ದಾರೆ.
ಶಾಂತರಾಜು ಹಾಗೂ ಚಂದ್ರಶೇಖರ್ ಎಂಬುವವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಿ ನಿವೇಶನ ವಿಂಗಡಿಸಿ ಮಾರಾಟ ಮಾಡುವ ಯತ್ನಿಸುತ್ತಿದ್ದರು. ಮಂಗಳವಾರ ಬೆಳಗ್ಗೆ ಜಿಲ್ಲಾಧಿಕಾರಿ ವಿ.ಶಂಕರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಲ್ಲಿ ನಿರ್ಮಿಸಲಾಗಿದ್ದ ಶೆಡ್, ವಸತಿ ಕಟ್ಟಡಗಳನ್ನುತೆರವುಗೊಳಿಸಿ ವಶಕ್ಕೆ ಪಡೆದುಕೊಂಡರು.
ಕೆರೆಯ ಜಾಗ ಒತ್ತುವರಿಯಾಗಿರುವ ಕುರಿತು ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ದಕ್ಷಿಣ ತಾಲೂಕು ಉಪ ವಿಭಾಗಾಧಿಕಾರಿಗಳು ಸ್ಥಳ ತನಿಖೆ ಕೈಗೊಂಡು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಕೆ ಮಾಡಿದ್ದರು. ಅದರ ಹಿನ್ನೆಲೆಯಲ್ಲಿ ಭೂಮಾಪನ ಇಲಾಖೆ ದಾಖಲೆಗಳನ್ನು ಪರಿಶೀಲಿಸಿದಾಗ ಕೆರೆ ಜಾಗ ಒತ್ತುವರಿಯಾಗಿರುವುದು ಬೆಳಕಿಗೆ ಬಂದಿತ್ತು.
ಅದರಂತೆ ಒತ್ತುವರಿದಾರರಿಗೆ ನೋಟಿಸ್ ನೀಡಿದ ತಹಸೀಲ್ದಾರ್ ಶಿವಕುಮಾರ್ ನೇತೃತ್ವದ ತಂದ ಕೆರೆ ಜಾಗವನ್ನು ವಶಕ್ಕೆ ಪಡೆದು ಫಲಕ ಅಳವಡಿಸಿದ್ದು, ಒತ್ತುವರಿದಾರರ ವಿರುದ್ಧœ ಭೂ ಒತ್ತುವರಿ ವಿಶೇಷ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಗರ ಜಿಲ್ಲಾ ವಿಭಾಗಾಧಿಕಾರಿಗಳು, ಬಿಎಂಟಿಎಫ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಸಂಬಂಧಪಟ್ಟ ತಾಲೂಕು ತಹಸೀಲ್ದಾರರು, ರಾಜಸ್ವ ನಿರೀಕ್ಷರು ಹಾಜರಿದ್ದರು.
ಒತ್ತುವರಿದಾರರು ಕೆರೆ ಜಾಗವನ್ನು ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ವಿಭಜಿಸಿ ಮಾರಾಟ ಮಾಡಲು ಮುಂದಾಗಿದ್ದರು. ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಜಾಗ ಕೆರೆಗೆ ಸೇರಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಜಾಗವನ್ನು ವಶಕ್ಕೆ ಪಡೆಯಲಾಗಿದ್ದು, ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು.
-ಡಿ.ಬಿ. ನಟೇಶ್, ಬೆಂಗಳೂರು ದಕ್ಷಿಣ ತಾಲೂಕು ಉಪವಿಭಾಗಾಧಿಕಾರಿ