ಬೆಂಗಳೂರು: ಪೊಲೀಸರ ಸೂಚನೆಯಂತೆ ಸ್ಥಗಿತಗೊಳಿಸಿರುವ ಬ್ಯಾಂಕ್ ಖಾತೆಯಲ್ಲಿ ವ್ಯವಹಾರ ಮುಂದುವರಿಸಲು ಖ್ಯಾತ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರಿಗೆ ಹೈಕೋರ್ಟ್ ಷರತ್ತಿನ ಅನುಮತಿ ನೀಡಿದೆ. ಅಧೀನ ನ್ಯಾಯಾಲಯಕ್ಕೆ 20 ಲಕ್ಷ ರೂ. ಮೊತ್ತದ ಶ್ಯೂರಿಟಿ ಬಾಂಡ್ ನೀಡಿ ಬ್ಯಾಂಕ್ ಖಾತೆ ವ್ಯವಹಾರ ನಡೆಸಬಹುದು ಎಂದು ಹೈಕೋರ್ಟ್ ಸೂಚಿಸಿದೆ.
ವಿಕ್ರಂ ಇನ್‌ವೆಸ್ಟ್‌ಮೆಂಟ್ ಕಂಪನಿ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಮಲ್ಲೇಶ್ವರ ಐಡಿಬಿಐ ಬ್ಯಾಂಕ್ ಶಾಖೆಯಲ್ಲಿದ್ದ ತಮ್ಮ ಖಾತೆ ಸ್ಥಗಿತಗೊಳಿಸಿದ್ದ ಬನಶಂಕರಿ ಠಾಣೆ ಪೊಲೀಸರ ಕ್ರಮ ಪ್ರಶ್ನಿಸಿ ಪ್ರಕಾಶ್ ಪಡುಕೋಣೆ, ಅವರ ಪತ್ನಿ ಉಜಾಲ ಪಡುಕೋಣೆ ಹಾಗೂ ಪುತ್ರಿ ಅನಿಷಾ ಪಡುಕೊಣೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆ ಮೂಲಕ ವ್ಯವಹಾರ ಮುಂದುವರಿಸಲು 20 ಲಕ್ಷ ರೂ. ಮೊತ್ತದ ಬಾಂಡ್ ಶ್ಯೂರಿಟಿಯನ್ನು ಅಧೀನ ನ್ಯಾಯಾಲಯಕ್ಕೆ ನೀಡಿ ಪ್ರಮಾಣಪತ್ರ ಸಲ್ಲಿಸಬೇಕು. ತನಿಖೆ ಪೂರ್ಣಗೊಳ್ಳುವ ತನಕ ಈ ಶ್ಯೂರಿಟಿ ಅನ್ವಯವಾಗಲಿದೆ. ನಂತರವಷ್ಟೇ ಬ್ಯಾಂಕ್ ಅಧಿಕಾರಿಗಳು ಸ್ಥಗಿತಗೊಳಿಸಿರುವ ಬ್ಯಾಂಕ್ ಖಾತೆಯಲ್ಲಿ ವ್ಯವಹರಿಸಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.
ಪ್ರಕರಣವೇನು?: ಷೇರು ಮಾರುಕಟ್ಟೆ ಹೂಡಿಕೆಯಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ನೀಡುವಂತೆ ಗ್ರಾಹಕರಿಂದ ನೂರಾರು ಕೋಟಿ ಹಣ ಕಟ್ಟಿಸಿಕೊಂಡು ವಂಚಿಸಿರುವ ಸಂಬಂಧ ಬನಶಂಕರಿ ಠಾಣೆ ಪೊಲೀಸರು ವಿಕ್ರಂ ಇನ್‌ವೆಸ್ಟ್‌ಮೆಂಟ್ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಕಂಪನಿಯಲ್ಲಿ ಮಾಜಿ ಬ್ಯಾಡ್ಮಿಂಟನ್ ಆಟ ಗಾರ ಪ್ರಕಾಶ್ ಪಡುಕೋಣೆ ಸಹ ಹಣ ಹೂಡಿಕೆ ಮಾಡಿದ್ದು, ಒಂದೇ ಬಾರಿ ಅವರ ಖಾತೆಗೆ 19.97 ಲಕ್ಷ ರೂ. ವರ್ಗಾವಣೆ ಆಗಿರುವುದು ತನಿಖೆ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆ ಭಾಗವಾಗಿ ಪ್ರಕಾಶ್ ಪಡುಕೋಣೆ ಅವರ ಬ್ಯಾಂಕ್ ಖಾತೆಯನ್ನು ಪೊಲೀಸರು ಸ್ಥಗಿತಗೊಳಿಸಿದ್ದರು.