ವಿಧಾನ ಪರಿಷತ್ತು: ಹಾಜರಾತಿ ಪ್ರಮಾಣ ಹೆಚ್ಚಿಸಲು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಅವರ ಪ್ರತಿ ದಿನದ ಹಾಜರಾತಿಗೆ ನೀಡಲಾಗುತ್ತಿದ್ದ 2 ರೂ. ಪ್ರೋತ್ಸಾಹ ಧನವನ್ನು ವರ್ಷಾಂತ್ಯಕ್ಕೆ ಕೊಡುತ್ತಿದ್ದುದರಿಂದ ಹೆಣ್ಣು ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತಿಲ್ಲ. ಹೀಗಾಗಿ ಯೋಜನೆಯನ್ನು ಸದ್ಯಕ್ಕೆ ಸ್ಥಗಿತ ಗೊಳಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವಿರ್ ಸೇಠ್ ಹೇಳಿದ್ದಾರೆ.
ಬಿಜೆಪಿಯ ತಾರಾ ಅನುರಾಧಾ ಅವರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದ ವಿಷಯಕ್ಕೆ ಗುರುವಾರ ಸದನದಲ್ಲಿ ಲಿಖೀತ ಉತ್ತರ ನೀಡಿದ ಸಚಿವರು, ಹೆಣ್ಣು ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿಸಲು 2013-14ರಲ್ಲಿ ಈ ಕಾರ್ಯಕ್ರಮ ಆರಂಭಿಸಲಾಗಿತ್ತು. ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿದಿನದ ಹಾಜರಾತಿಗೆ ಅನುಗುಣವಾಗಿ ದಿನಕ್ಕೆ 2ರೂ. ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಹಣವನ್ನು
ವರ್ಷದ ಕೊನೆಯಲ್ಲಿ ನೀಡಲಾಗುತ್ತಿತ್ತು. ಇದರಿಂದ ಒಂದರಿಂದ ಮಗುವಿಗೆ ಗರಿಷ್ಠ ಮೌಲ್ಯ 450ರೂ. ಸಿಗಬಹುದು. ಅದು ಸಹ ವರ್ಷಾಂತ್ಯದಲ್ಲಿ ನೀಡುವುದರಿಂದ ಹೆಚ್ಚು ಪ್ರೋತ್ಸಾಹ ನೀಡಿದಂತಾಗುವುದಿಲ್ಲ. ಹೀಗಾಗಿ ಯೋಜನೆ ಸ್ಥಗಿತಗೊಳಿಸಲಾಗಿದೆ ಎಂದರು.
ಒಟ್ಟಾರೆ ದಾಖಲಾತಿ ಅನುಪಾತ ಅನ್ವಯ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಬಾಲಕಿಯರ ದಾಖಲಾತಿ ಪ್ರಮಾಣ ಶೇ.99.42 ಇದೆ. ಹೆಣ್ಣು ಮಕ್ಕಳಿಗೆ ನೀಡುವ ಪ್ರೋತ್ಸಾಹಧನ ಪಾವತಿಸುವ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿಗಳಿಗೆ ನೀಡಲಾಗಿತ್ತು. ಆದರೆ, ಅವರಿಂದ ಸರಿಯಾಗಿ ಅನುದಾನ ಬಳಕೆ ವರದಿ ಬರುತ್ತಿರಲಿಲ್ಲ. ಈ ಬಗ್ಗೆ ಲೋಕಾಯುಕ್ತದಲ್ಲಿ ದೂರುಗಳು ದಾಖಲಾಗಿದೆ. ಈ ಎಲ್ಲಾ ಕಾರಣಗಳಿಂದ ಪಾರದರ್ಶಕ ನಿರ್ವಹಣೆ ಬಗ್ಗೆ ಕ್ರಮ ಕೈಗೊಳ್ಳುವ ಅವಶ್ಯಕತೆ ಇದ್ದು, ಸದ್ಯಕ್ಕೆ ಇದನ್ನು
ಸ್ಥಗಿತಗೊಳಿಸಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆ.