Advertisement
ಪ್ರಸಕ್ತ ಆರ್ಥಿಕ ವರ್ಷದ ಮೊದಲ ನಾಲ್ಕು ತಿಂಗಳಿಗೆ 80,168 ಕೋಟಿ ರೂ.ಲೇಖಾನುದಾನ ಪಡೆಯಲಾಗಿತ್ತು. ನಂತರದ ಮೂರು ತಿಂಗಳಿಗೆ ಎರಡನೇ ಬಾರಿ 62,751 ಕೋಟಿ ರೂ.ಲೇಖಾನುದಾನ ಪಡೆಯಲಾಗಿತ್ತು. ಇದೀಗ ಬಜೆಟ್‌ಗೆ ಅನುಮೋದನೆ ಪಡೆಯಲಾಗಿದೆ. ರಾಜಸ್ವ ವೆಚ್ಚಕ್ಕೆ 1,84,649 ಕೋಟಿ ರೂ.ಹಾಗೂ ಬಂಡವಾಳ ವೆಚ್ಚಗಳಿಗೆ 56,096 ಕೋಟಿ ರೂ.ವಿನಿಯೋಗಿಸಲಾ ಗುವುದು. ಇದರಲ್ಲಿ 9,964 ಕೋಟಿ ರೂ.ಸಾರ್ವಜನಿಕ ಸಾಲವಿರುವುದಾಗಿ ಬಿಎಸ್‌ವೈ ಪ್ರಕಟಿಸಿದರು.
Related Articles
Advertisement
ಸದ್ಬಳಕೆಗೆ ಕುಮಾರಸ್ವಾಮಿ ಸಲಹೆ: ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಮಾತ ನಾಡಿ, ಸಂಪನ್ಮೂಲದ ಸದ್ಬಳಕೆಗೆ ಗಮನ ನೀಡಬೇಕು. 2017-18ನೇ ಸಾಲಿನಲ್ಲಿ 17,000 ಕೋಟಿ ರೂ.ಖರ್ಚಾಗದೆ ಉಳಿದಿದೆ ಎಂದು ಮಹಾಲೇಖಪಾಲರ ವರದಿಯಲ್ಲಿದೆ. ಪೂರಕ ಅಂದಾಜಿನಲ್ಲೂ 2,500 ಕೋಟಿ ರೂ.ಖರ್ಚಾಗದೆ ಉಳಿದಿರುವ ಬಗ್ಗೆಯೂ ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.
2019-2020ನೇ ಸಾಲಿನಲ್ಲಿ ನೆರೆಯಿಂದ ಹಾಳಾದ ರಸ್ತೆ, ಸೇತುವೆ ನಿರ್ಮಾಣ ದುರಸ್ತಿಗೆ 468 ಕೋಟಿ ರೂ.ಮೊತ್ತ ಸೇರ್ಪಡೆ ಮಾಡಲಾಗಿತ್ತು. ಅದನ್ನು ತಿರಸ್ಕರಿಸಿರು ವುದು ಸರಿಯಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್‌ರಾಜ್ ಇಲಾಖೆಯಲ್ಲಿ 800 ಕೋಟಿ ರೂ.ಮೊತ್ತದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದು, ಮುಂದುವರಿ ಸಬೇಕು. ಹೈ-ಕ ಭಾಗಕ್ಕೆ ನೀಡಲಾಗಿದ್ದ ಅನುದಾನ ಕಡಿತ ವಾಗಬಾರದು. 2018-19ನೇ ಸಾಲಿನಲ್ಲಿ ಸಚಿವ ಸಂಪು ಟದ ಒಪ್ಪಿಗೆ ಪಡೆದ ಯೋಜನೆಗಳ ಮೊತ್ತ ಕಡಿತಗೊಳಿಸದೆ ಮುಂದುವರಿಸಬೇಕು ಎಂದು ಮನವಿ ಮಾಡಿದರು.
ಆರ್.ವಿ.ದೇಶಪಾಂಡೆ ಮಾತನಾಡಿ, ದೇಶದ ಹಲವೆಡೆ ಕೈಗಾರಿಕೆ, ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಹಿಂಜರಿತ ಇದೆ. ಅದರ ಪರಿಣಾಮ ಆದಾಯ ಸಂಗ್ರಹದ ಮೇಲೆ ಬೀರುತ್ತದೆ. ಹೊಸ ಕೈಗಾರಿಕಾ ನೀತಿ ಜಾರಿಗೊಳಿಸಿ, ಹೂಡಿಕೆಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು. ಮುಖ್ಯಮಂತ್ರಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ರಾಜ್ಯದ ಹಣಕಾಸಿನ ಸ್ಥಿತಿಗೆ ಅನುಗುಣವಾಗಿ ಎಲ್ಲರ ನಿರೀಕ್ಷೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ನಂತರ, ವಿಧಾನಸಭೆಯಲ್ಲಿ ಧನವಿನಿಯೋಗ ವಿಧೇಯಕಕ್ಕೆ ಅನುಮೋದನೆ ಪಡೆಯಲಾಯಿತು. ನಂತರ ವಿಧಾನ ಪರಿಷತ್‌ನಲ್ಲೂ ವಿಧೇಯಕ ಮಂಡಿಸಿ ಯಡಿಯೂರಪ್ಪ ಅನುಮೋದನೆ ಪಡೆದರು.
ಆರ್ಥಿಕ ಹಿಂಜರಿತ ಇದೆ – ಸಿದ್ದರಾಮಯ್ಯ: ಧನಿವಿನಿಯೋಗ ವಿಧೇಯಕ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮುಂದಾದರೂ ಎರಡೆರಡು ಬಾರಿ ಲೇಖಾನುದಾನ ಪಡೆಯುವುದನ್ನು ಕೊನೆಗಾಣಿಸಬೇಕು ಎಂದು ಹೇಳಿದರು. ದೇಶದಲ್ಲಿ ಆರ್ಥಿಕ ಹಿಂಜರಿತ ಇದೆ. 2017-18ನೇ ಸಾಲಿನಲ್ಲಿ ಶೇ.7ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಶೇ.5ಕ್ಕೆ ಕುಸಿದಿದೆ. ರಿಯಲ್ ಎಸ್ಟೇಟ್ ಉದ್ಯಮ ಕುಸಿದಿದೆ. ಹೂಡಿಕೆ ಕಡಿಮೆಯಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ವಾಹನ ಖರೀದಿ ಉತ್ತೇಜಕವಾಗಿಲ್ಲದ ಕಾರಣ ವಾಹನ ನೋಂದಣಿ ತೆರಿಗೆ ಆದಾಯ ಕುಸಿದಿದೆ.
ಇದು ಜಿಡಿಪಿ ಮೇಲೆ ಪರಿಣಾಮ ಬೀರಲಿದೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು. ಹಿಂದೆ ಕೇಂದ್ರ ಹಣಕಾಸು ಸಚಿವರಾಗಿದ್ದ ಪಿಯೂಷ್ ಗೋಯೆಲ್ ಮಂಡಿಸಿದ 2019-2020ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರದಿಂದ ರಾಜ್ಯಕ್ಕೆ 39,000 ಕೋಟಿ ರೂ.ನೀಡುವುದಾಗಿ ಪ್ರಕಟಿಸಿದ್ದರು. ಆದರೆ, ಹಾಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರದಿಂದ ಬರಬೇಕಾದ ಪಾಲಿನಲ್ಲಿ 1,672 ಕೋಟಿ ರೂ.ಕಡಿತಗೊಳಿಸಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರದ ಮೇಲೆ ಒತ್ತಡ ಹೇರಿ ಆ ಹಣ ಪಡೆಯಬೇಕು ಎಂದು ಆಗ್ರಹಿಸಿದರು.