ಭೇರ್ಯ: ದೇಶದಲ್ಲಿ ರೈತರ ಬಗ್ಗೆ ಚಿಂತನೆ ಮತ್ತು ಹೋರಾಟ ಮಾಡುತ್ತಿರುವ ವ್ಯಕ್ತಿ ಎಂದರೆ ಅದು ಮಾಜಿ ಪ್ರಧಾನಿ ದೇವೇಗೌಡರು ಒಬ್ಬರೇ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು. ಸಮೀಪದ ಮಂಡಿಗನಹಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಪ. ಜಾತಿ ಮತ್ತು ವರ್ಗದ ಜನಾಂಗದವರ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡಿದರು ಎಂದರೆ ಅದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತ್ರ ಎಂದರು.
ಶಾಸಕರು ಮಂಡಿಗನಹಳ್ಳಿ ಗ್ರಾಮಕ್ಕೆ ಭೇರ್ಯ ಕೆರೆಯಿಂದ ಏತನೀರಾವರಿ ಯೋಜನೆಯ ಕಾಮಗಾರಿಗೆ ಅದಷ್ಟು ಬೇಗ ಗುದ್ದಲಿಪೂಜೆ ಮಾಡಲಾಗುವುದು. ತಾಲೂಕಿನ ಹೊಸಕೋಟೆ, ಬ್ಯಾಡರಹಳ್ಳಿ, ಮುಕ್ಕನಹಳ್ಳಿ ಕೆರೆಗಳ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಇನ್ನೂ ಆರು ತಿಂಗಳಲ್ಲಿ ನೀರು ತುಂಬಿಸಲು 16 ಕೋಟಿ ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ ಎಂದರು.
ಮಂಡಿಗನಹಳ್ಳಿ ಗ್ರಾಮದ ಹೆಬ್ಟಾಗಿಲಿನಿಂದ ಹರಂಬಳ್ಳಿಕೊಪ್ಪಲು ಗ್ರಾಮದ ಮಾರ್ಗವಾಗಿ ಹಾಸನ – ಮೈಸೂರು ಹೆದ್ದಾರಿವರೆಗೆ ರಸ್ತೆ ಅಭಿವೃದ್ಧಿ ಮಾಡಿ ಡಾಂಬರೀಕರಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಹಣ ಮಂಜೂರು ಆದ ಕೂಡಲೇ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ಮಾಡುತ್ತೇನೆ ಎಂದರು.
ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್ ಮಾತನಾಡಿ, ಎಲ್ಲರಿಗೂ ತಕ್ಷಣ ಹಣ ಸಿಗುವುದು, ಇಂದಿನ ದಿನಗಳಲ್ಲಿ ಡೇರಿಗಳಿಂದ ಎಷ್ಟೋ ಬಡ ಕುಟುಂಬಗಳು ಬದುಕು ನಡೆಸುತ್ತಿವೆ. ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದಾರೆ ಎಂದರೆ ಆದಕ್ಕೆ ಡೇರಿ ಮುಖ್ಯ ಕಾರಣ ಎಂದರು.
ಯಾವುದೇ ಗ್ರಾಮಗಳಲ್ಲಿ ಸಾಮರಸ್ಯ ವಿಲ್ಲದೆ ಎಷ್ಟೋ ಡೇರಿಗಳು ಹಾಳಾಗಿದ್ದು ಕಣ್ಮುಂದೆ ಕಾಣುತ್ತೇವೆ. ಮಂಡಿಗನಹಳ್ಳಿ ಗ್ರಾಮದಲ್ಲಿ ಸಾಮರಸ್ಯ ಇರುವುದರಿಂದ ದೇವಾಲಯ, ಗ್ರಾಮದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟು ಕೇವಲ ಆರು ವರ್ಷಗಳಲ್ಲಿ ಡೈರಿ ಹೊಸ ಕಟ್ಟಡ ಕೂಡ ಕಟ್ಟಿಸಿ ಉದ್ಘಾಟನೆಯನ್ನು ಮಾಡಿಸಿದ್ದೀರಿ ಅದ್ದರಿಂದ ನಿಮ್ಮ ಗ್ರಾಮ ಬೇರೆ ಗ್ರಾಮಗಳಿಗೆ ಮಾದರಿಯಾಗಿರಲಿ ಎಂದು ಶುಭ ಹಾರೈಸಿದರು.