Advertisement

ಗುಣಮಟ್ಟದ ಸೇವೆಗೆ 1500 ಕೋಟಿ ವೆಚ್ಚ

01:31 PM Dec 01, 2017 | |

ಬೆಂಗಳೂರು: ಬಿಎಸ್‌ಎನ್‌ಎಲ್‌ನ ಉತ್ತಮ ನೆಟ್‌ವರ್ಕ್‌ ಮತ್ತು ಗುಣಮಟ್ಟದ ಸೇವೆಗಳಿಗಾಗಿ ಮೂರು ವರ್ಷಗಳಲ್ಲಿ ಕರ್ನಾಟಕಕ್ಕಾಗಿ ಕೇಂದ್ರ ಸರ್ಕಾರ 1,500 ಕೋಟಿ ರೂ.ಗಿಂತ ಅಧಿಕ ಹಣ ಖರ್ಚು ಮಾಡಿದೆ ಎಂದು ಕೇಂದ್ರ ಸಂಹವನ ಖಾತೆ (ಸ್ವತಂತ್ರ ಖಾತೆ) ರಾಜ್ಯ ಸಚಿವ ಮನೋಜ್‌ ಸಿನ್ಹ ತಿಳಿಸಿದರು.

Advertisement

ನಗರದ ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ಗುರುವಾರ ಭಾರತ್‌ ಸಂಚಾರ್‌ ನಿಗಮ ಲಿ., (ಬಿಎಸ್‌ಎನ್‌ಎಲ್‌) ಹಮ್ಮಿಕೊಂಡಿದ್ದ “ಎನ್‌ಎಂಎಸ್‌- ಬ್ರಾಡ್‌ಬ್ಯಾಂಡ್‌’ ಮತ್ತು “ಎನ್‌ಎಂಎಸ್‌- ಎಂಪಿಎಲ್‌ಎಸ್‌’ ವ್ಯವಸ್ಥೆ ಲೋಕರ್ಪಣೆ ಮಾಡಿ ಮಾತನಾಡಿದರು.
ರಾಜ್ಯದಲ್ಲಿ ಜಿಎಸ್‌ಎನ್‌, ಒಎಫ್ಸಿ,

ವೈ- ಫೈ ಸೇರಿದಂತೆ ವಿವಿಧ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವು ಗುಣಮಟ್ಟದ ಸೇವೆಗಳಿಗೆ ಈ ಹಣ ವಿನಿಯೋಗಿಸಲಾಗಿದೆ. ಇನ್ನೂ ಸಾಕಷ್ಟು ಪ್ರಗತಿ ಸಾಧಿಸಬೇಕಿದೆ. ಈ ನಿಟ್ಟಿನಲ್ಲಿ ಬಿಎಸ್‌ಎನ್‌ಎಲ್‌ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ಇದೆ ಎಂದರು. 

ಡಿಜಿಟಲ್‌ ಜವಾಬ್ದಾರಿ: ಸರ್ಕಾರದ ಕನಸು “ಡಿಜಿಟಲ್‌ ಇಂಡಿಯಾ’ ಸಾಕಾರಗೊಳ್ಳುವಲ್ಲಿ ಬಿಎಸ್‌ಎನ್‌ಎಲ್‌ ಜವಾಬ್ದಾರಿ ಹೆಚ್ಚಿದೆ. ಇದನ್ನು ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸಚಿವ ಮನೋಜ್‌ ಸಿನ್ಹ ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಒಂದು ಲಕ್ಷ ಗ್ರಾಮಗಳಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ಯೋಜನೆ ಈಗಾಗಲೇ ಕೈಗೆತ್ತಿಕೊಂಡಿದ್ದು, ಇದರಡಿ ಕೈಗೆತ್ತಿಕೊಂಡ ರಾಜ್ಯದ ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ ಒಂದೂವರೆ ಲಕ್ಷ ಗ್ರಾಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. 

Advertisement

ದೂರಸಂಪರ್ಕ ಸಚಿವಾಲಯದ ಕಾರ್ಯದರ್ಶಿ ಅರುಣಾ ಸುಂದರರಾಜನ್‌ ಮಾತನಾಡಿ, ಬಿಎಸ್‌ಎನ್‌ಎಲ್‌ ಡಿಜಿಟಲ್‌ ಬಿಲ್‌ ಪಾವತಿಯಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ನಿಟ್ಟಿನಲ್ಲಿ ಮತ್ತಷ್ಟು ಪ್ರಯತ್ನಗಳು ನಡೆಯಬೇಕಿದೆ ಎಂದರು. 

ಮಾರುಕಟ್ಟೆಯಲ್ಲಿ ಬಿಎಸ್‌ಎನ್‌ಎಲ್‌ ಗ್ರಾಹಕರ ಸಂಖ್ಯೆ ಏರುತ್ತಿದೆ. ಗ್ರಾಹಕರು ಮೊದಲು ಬಿಎಸ್‌ಎನ್‌ಎಲ್‌ ಸೇವೆ ಕೇಳುತ್ತಾರೆ. ಇದು ಲಭ್ಯವಿಲ್ಲದಿದ್ದರೆ, ಬೇರೆ ಕಂಪನಿಯತ್ತ ಮುಖ ಮಾಡುತ್ತಾರೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಈ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು. 

ಅಧಿಕಾರಿಗಳಿಗೆ ಕುಳಿತಲ್ಲೇ ಮಾಹಿತಿ: ಇನ್ಮುಂದೆ ಇಡೀ ದೇಶದಲ್ಲಿನ ಬಿಎಸ್‌ಎನ್‌ಎಲ್‌ ಜಾಲ ಮತ್ತು ಅದರ ವಿವಿಧ ಸೇವೆಗಳಲ್ಲಿ ಆಗಬಹುದಾದ ವ್ಯತ್ಯಯದ ಬಗ್ಗೆ ನಿಗಮದ ಅಧಿಕಾರಿಗಳಿಗೆ ಮುಂಚಿತವಾಗಿ ಕುಳಿತಲ್ಲಿಯೇ ಮಾಹಿತಿ ಲಭ್ಯವಾಗಲಿದೆ! 

ಇಂತಹದ್ದೊಂದು ವ್ಯವಸ್ಥೆಯನ್ನು ಗುರುವಾರ ಬಿಎಸ್‌ಎನ್‌ಎಲ್‌ ಜಾರಿಗೊಳಿಸಿದೆ. ಬ್ರಾಡ್‌ಬ್ಯಾಂಡ್‌ ಸೇರಿದಂತೆ ಹತ್ತಾರು ಸೇವೆಗಳನ್ನು ಎನ್‌ಎಂಎಸ್‌ (ನೆಟ್‌ವರ್ಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟ್‌ಂ) ಅಡಿ ತರಲಾಗಿದ್ದು, ಇದು ದೇಶದ ಬಿಎಸ್‌ಎನ್‌ಎಲ್‌ ಜಾಲದಲ್ಲಿ ಯಾವ ಭಾಗದಲ್ಲಿ ಲೋಪವಾಗಿದೆ ಹಾಗೂ ನೆಟ್‌ವರ್ಕ್‌ ವೀಕ್‌ ಆಗಿದೆ ಎಂಬುದರ ಬಗ್ಗೆ ಸೂಚನೆ ನೀಡುತ್ತದೆ.

ಇದೆಲ್ಲದರ ನಿರ್ವಹಣೆ ಬೆಂಗಳೂರು ಬಿಎಸ್‌ಎನ್‌ಎಲ್‌ ಕಚೇರಿಯಿಂದಲೇ ಆಗಲಿದೆ. ಈ ಸಂಬಂಧ ಅಧಿಕಾರಿಗಳಿಗಾಗಿಯೇ ಪ್ರತ್ಯೇಕ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ಇವೆಲ್ಲವುಗಳ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ, ಈ ವ್ಯವಸ್ಥೆಯನ್ನು ಸಚಿವ ಮನೋಜ್‌ ಸಿನ್ಹ ಬಿಡುಗಡೆಗೊಳಿಸಿದರು. 

ಬಿಎಎಸ್‌ಎನ್‌ಎಲ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅನುಪಮ್‌ ಶ್ರೀವಾತ್ಸವ್‌ ಮಾತನಾಡಿ, ಈ ಹಿಂದೆ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಂಡುಬಂದ ನಂತರ ಅದನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಸರಿಪಡಿಸಲಾಗುತ್ತಿತ್ತು.

ಇನ್ಮುಂದೆ ಮುಂಚಿತವಾಗಿಯೇ ಸಮಸ್ಯೆ ಪತ್ತೆಹಚ್ಚಿ, ಪರಿಹಾರ ಕಂಡುಕೊಳ್ಳಲಾಗುವುದು. ಈ ಸಂಬಂಧ ಐಟಿಐ ಮತ್ತು ಐಐಟಿ ಸಹಯೋಗದಲ್ಲಿ ಎನ್‌ಎಂಎಸ್‌ ಜಾರಿಗೊಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next