ಲಕ್ನೋ:ಸುಗಂಧ ದ್ರವ್ಯ ಇಂಡಸ್ಟ್ರಿಯ ಮಾಲೀಕ, ಉದ್ಯಮಿ ಕಾನ್ಪುರ್ ಮೂಲದ ಪಿಯೂಷ್ ಜೈನ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಶುಕ್ರವಾರ (ಡಿಸೆಂಬರ್ 24) ಬೆಳಗ್ಗೆ ದಾಳಿ ನಡೆಸಿದ್ದು, ಬರೋಬ್ಬರಿ 150 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತ: 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಈವರೆಗೆ 358 ಒಮಿಕ್ರಾನ್ ಪ್ರಕರಣ ಪತ್ತೆ
ಮನೆಯ ವಾರ್ಡ್ ರೋಬ್ಸ್ ಗಳಲ್ಲಿ ತುಂಬಿಸಿಟ್ಟಿರುವ ರಾಶಿ, ರಾಶಿ ಹಣದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಣವನ್ನು ಪ್ಲಾಸ್ಟಿಕ್ ಕವರ್ ಒಳಗಡೆ ಸುತ್ತಿಟ್ಟು, ಹಳದಿ ಟೇಪ್ ನಿಂದ ಸುತ್ತಿಡಲಾಗಿದೆ ಎಂದು ವರದಿ ತಿಳಿಸಿದೆ.
ದಾಳಿ ನಡೆಸಿದ ನಂತರ ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಮತ್ತು ಜಿಎಸ್ ಟಿ ಅಧಿಕಾರಿಗಳು ರೂಂನ ನಡುವೆ ರಾಶಿ ಹಾಕಿದ್ದು, ನಗದು ಲೆಕ್ಕಹಾಕಲು ಮೂರು ಮೆಷಿನ್ ಗಳನ್ನು ತಂದಿಟ್ಟಿರುವುದು ಮತ್ತೊಂದು ಫೋಟೋದಲ್ಲಿ ಸೆರೆಯಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದು, ಶುಕ್ರವಾರವೂ ನೋಟುಗಳ ಲೆಕ್ಕಾಚಾರ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ತೆರಿಗೆ ಅಧಿಕಾರಿಗಳು ಜೈನ್ ನಿವಾಸ ಇರುವ ಉತ್ತರಪ್ರದೇಶದ ಕಾನ್ಪುರ್, ಮುಂಬಯಿ ಹಾಗೂ ಗುಜರಾತ್ ನಲ್ಲಿಯೂ ದಾಳಿ ನಡೆಸಿರುವುದಾಗಿ ವಿವರಿಸಿದೆ.
ನಕಲಿ ಬಿಲ್ ಮೂಲಕ ಈ ಹಣವನ್ನು ಲಾರಿಗಳಲ್ಲಿ ಸಾಗಿಸಲಾಗುತ್ತಿದ್ದು, ನಕಲಿ ಕಂಪನಿಯ ಹೆಸರಿನಲ್ಲಿ ಬಿಲ್ ಮಾಡಿ ಹಣವನ್ನು ಅಕ್ರಮವಾಗಿ ಸಾಗಿಸಿ, ಜಿಎಸ್ ಟಿ ಪಾವತಿಯಿಂದ ನುಣುಚಿಕೊಂಡಿರುವುದಾಗಿ ಜಿಎಸ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.