Advertisement

15 ಲಕ್ಷ ರೂ. ಮೌಲ್ಯದ ಬೆಳ್ಳಿ ದೀಪ ಪತ್ತೆ

12:55 AM Jan 12, 2019 | |

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಐರಾವತ ಕ್ಲಬ್‌ ಕ್ಲಾಸ್‌ ಬಸ್‌ನಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಸುಮಾರು 15 ಲಕ್ಷ ಮೌಲ್ಯದ ಬೆಳ್ಳಿ ದೀಪಗಳು ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.

Advertisement

ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಐರಾವತ ಕ್ಲಬ್‌ ಕ್ಲಾಸ್‌ (ಕೆಎ 57 ಎಫ್-2844)ನಲ್ಲಿ ಬೆಳ್ಳಿಯ ದೀಪಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಅನುಮಾನದ ಮೇರೆಗೆ ವಿಭಾಗೀಯ ನಿಯಂತ್ರಣಾಧಿಕಾರಿಗಳ ನೇತೃತ್ವದಲ್ಲಿ ಗುರುವಾರ ಹೊಸಕೋಟೆ ಟೋಲ್‌ ಬಳಿ ರಾತ್ರಿ 9ರ ಸುಮಾರಿಗೆ ಬಸ್‌ ತಪಾಸಣೆಗೊಳಪಡಿಸಿದಾಗ, ಬೆಳ್ಳಿ ವಸ್ತುಗಳು ತುಂಬಿದ ನಾಲ್ಕು ಬ್ಯಾಗ್‌ಗಳು ಪತ್ತೆಯಾಗಿವೆ. ಇದರಲ್ಲಿ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರೂ ಶಾಮೀಲಾದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಬಸ್‌ ತಪಾಸಣೆಗೊಳಪಡಿಸಿದಾಗ, ನಾಲ್ಕು ಬ್ಯಾಗ್‌ಗಳಿಗೆ ನಿಗಮದ ಟ್ಯಾಗ್‌ಗಳು ಇರಲಿಲ್ಲ. ಅನುಮಾನ ಬಂದು ವಿಚಾರಿಸಿದಾಗ, ನಿರ್ವಾಹಕರು ಅದರ ವಾರಸುದಾರರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.

ನಂತರ ಈ ಕುರಿತು ಚಾಲಕರು ಮತ್ತು ನಿರ್ವಾಹಕರನ್ನು ತೀವ್ರ ವಿಚಾರಣೆಗೊಳಪಡಿಸಿದಾಗ, ಬೆಳ್ಳಿ ದೀಪಗಳನ್ನು ತುಂಬಿರುವುದು ಬೆಳಕಿಗೆ ಬಂದಿದೆ. ಬ್ಯಾಗ್‌ಗಳಲ್ಲಿ 699 ದೀಪಗಳಿದ್ದು, ಅವುಗಳ ತೂಕ 40.950 ಕೆಜಿ ಆಗಿದೆ. ಇದರ ಮೌಲ್ಯ 15 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ವಸ್ತುಗಳನ್ನು ನಂತರ ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಉದ್ದೇಶಿತ ಬಸ್‌ನಲ್ಲಿ ಸುಮಾರು 45 ಪ್ರಯಾಣಿಕರಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ಅಮಾನತುಗೊಂಡವರ ಬದಲಿಗೆ ಬೇರೆ ಚಾಲಕ ಮತ್ತು ನಿರ್ವಾಹಕರನ್ನು ನಿಯೋಜಿಸಲಾಯಿತು. ಕಾರ್ಯಾಚರಣೆಯಲ್ಲಿ ಕೇಂದ್ರೀಯ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಟಿ. ಪ್ರಭಾಕರ ರೆಡ್ಡಿ, ವಿಭಾಗೀಯ ಭದ್ರತಾ ನಿರೀಕ್ಷಕಿ ಸಿ.ಕೆ. ರಮ್ಯಾ, ಸಂಚಾರ ನಿಯಂತ್ರಕ ಎಚ್‌.ಎಂ. ಚಲಪತಿ ನೇತೃತ್ವ ವಹಿಸಿದ್ದರು. ಕಾರ್ಯಾಚರಣೆ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಪ್ರಭಾಕರ ರೆಡ್ಡಿ, “ಹೀಗೆ ಅನಧಿಕೃತವಾಗಿ ವಸ್ತುಗಳನ್ನು ಸಾಗಿಸುತ್ತಿರುವ ಬಗ್ಗೆ ವಾರದಿಂದ ಅನುಮಾನ ಇತ್ತು. ಆದರೆ, ಖಾತ್ರಿ ಇರಲಿಲ್ಲ. ಗುರುವಾರ ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಟೋಲ್‌ ಬಳಿ ಬಸ್‌ ಅನ್ನು ತಡೆದು ತಪಾಸಣೆಗೊಳಪಡಿಸಿದಾಗ,ಪ್ರಕರಣ ಬೆಳಕಿಗೆ ಬಂದಿತು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.ನಿಗಮದ ಅಧಿಕಾರಿಗಳ ಈ ಕಾರ್ಯಾಚರಣೆಗೆ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next