ಬೆಳಗಾವಿ: ನಗರದ ಹೊರವಲಯದಲ್ಲಿರುವ ಐತಿಹಾಸಿಕ ಸುಂದರ ತಾಣ ರಾಜಹಂಸಗಡ ಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ತಿಳಿಸಿದ್ದಾರೆ.
ಈ ಕುರಿತು ಪ್ರತಿಕಾ ಪ್ರಕಟಣೆ ನೀಡಿರುವ ಅವರು, ಕೋಟೆ ಅಭಿವೃದ್ಧಿಗಾಗಿ ಮೊದಲ ಹಂತದಲ್ಲಿ 3.50 ಕೋಟಿ ರೂ. ಬಿಡುಗಡೆಯಾಗಿದೆ. ರಾಜಹಂಸಗಡ ಅತ್ಯಂತ ಸುಂದರ ಪ್ರದೇಶವಾಗಿದ್ದರೂ ಈವರೆಗೂ ನಿರ್ಲಕ್ಷಿಸಲ್ಪಟ್ಟಿತ್ತು. ಪ್ರವಾಸಿ ತಾಣವಾಗಿ ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ಎಲ್ಲ ಅವಕಾಶಗಳಿದ್ದರೂ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ. ಇಂಥ ಐತಿಹಾಸಿಕ ಸ್ಥಳವನ್ನು ಪ್ರವಾಸಿ ತಾಣವಾಗಿ ಮಾಡುವಲ್ಲಿ ಈ ಹಿಂದಿನ ಜನಪ್ರತಿನಿಧಿಗಳು ಆಸಕ್ತಿ ತೋರಿರಲಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದಿನ ಸಮ್ಮಿಶ್ರ ಸರಕಾರವಿದ್ದಾಗ 15 ಕೋಟಿ ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಪ್ರವಾಸೋದ್ಯಮ ಇಲಾಖೆಯಿಂದ ಮೊದಲ ಹಂತದಲ್ಲಿ 5ಕೋಟಿ ರೂ. ಮಂಜೂರಾಗಿದ್ದು, 3 ಕೋಟಿ ರೂ. ಬಿಡುಗಡೆಯಾಗಿದೆ. ಸದ್ಯದಲ್ಲೇ ಕೆಲಸ ಆರಂಭಿಸಲಾಗುತ್ತಿದೆ ಎಂದು ಹೆಬ್ಟಾಳಕರ ತಿಳಿಸಿದ್ದಾರೆ.
ರಾಜಹಂಸಗಡದಲ್ಲಿ ಶಿವಾಜಿಯ ಮೂರ್ತಿ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕಾಗಿ 50 ಲಕ್ಷ ರೂ. ಬಿಡುಗಡೆಯಾಗಿದೆ. ಈ ಕಾರ್ಯವೂ ಆರಂಭವಾಗಿದೆ. ಶಿವಸ್ಮಾರಕ ನಿರ್ಮಾಣ, ಹೆರಿಟೆಜ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ಪ್ರವಾಸಿಗರಿಗೆ ಬಂದು ಹೋಗಿ ಮಾಡಲು ಅನುಕೂಲವಾಗುವಂತೆ ರಸ್ತೆಯನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಯೋಜನೆ ಮೂಲಕ ಸುತ್ತಮುತ್ತಲೂ ಇರುವ ಸುಳಗಾ, ಯಳ್ಳೂರು, ದೇಸೂರು,ನಂದಿಹಳ್ಳಿ ಭಾಗದ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎನ್ನುವುದು ಕೂಡ ನನ್ನ ಆಶಯ ಎಂದು ತಿಳಿಸಿದ್ದಾರೆ.
ಬೆಳಗಾವಿ ನಗರದಿಂದ ಕೇವಲ 7 ಕಿಮೀ ಅಂತರದಲ್ಲಿರುವ ಶಿವಾಜಿ ಕಟ್ಟಿದ ಕೋಟೆ ರಾಜಹಂಸಗಡ. ಅತ್ಯಂತ ಎತ್ತರ ಪ್ರದೇಶದಲ್ಲಿರುವ ಕೋಟೆ ಪ್ರದೇಶ ಮನಮೋಹಕವಾಗಿದೆ. ಯಾವುದೇ ಸೌಲಭ್ಯವಿಲ್ಲದಿದ್ದರೂ ನಿತ್ಯ ಪ್ರವಾಸಿಗರು ಆಗಮಿಸುತ್ತಾರೆ. ಸರಿಯಾದ ಯೋಜನೆ ಜಾರಿಯಾದರೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಬಹುದು. ಇದೀಗ ರೂಪಿಸಲಾಗಿರುವ ಯೋಜನೆ ಜಾರಿಯಾದಲ್ಲಿ ಬೆಳಗಾವಿಯಲ್ಲಿ ಸುಂದರ ಪ್ರವಾಸಿ ತಾಣ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ.