ಹಾಸನ: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ರೂಪಿಸಿದ್ದ ಮೂಲ ಯೋಜನೆಯಂತೆಯೇ ಚನ್ನಪಟ್ಟಣ ಕೆರೆ ಅಭಿವೃದ್ಧಿ ಮತ್ತು ಉದ್ಯಾನ ನಿರ್ಮಾಣದ 144 ಕೋಟಿ ರೂ.ಯೋಜನೆಯನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಸಲಹೆಯಂತೆ ಅನುಷ್ಠಾನಗೊಳಿಸಲು ನನ್ನ ಸಮ್ಮತಿ ಇದೆ ಎಂದು ಶಾಸಕ ಪ್ರೀತಂ ಜೆ.ಗೌಡ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದಂತೆ ಚನ್ನಪಟ್ಟಣ ಕೆರೆ ಅಭಿವೃದ್ಧಿಯ 144 ಕೋಟಿ ರೂ.ಯೋಜನೆಯನ್ನು ಅನುಷ್ಠಾನಗೊಳಿಸಲು ನನ್ನ ಒಪ್ಪಿಗೆ ಇದೆ. ಮೂಲ ಯೋಜನೆಯಲ್ಲಿ ಕೆರೆ ಅಭಿವೃದ್ಧಿಗೆ 44 ಕೋಟಿ ರೂ. ನಿಗದಿಯಾಗಿತ್ತು. ಅದರಂತೆ ಈಗ ಮಂಜೂರಾಗಿರುವ 144 ಕೋಟಿ ರೂ.ನಲ್ಲಿ ಮೊದಲ ಹಂತದಲ್ಲಿ ಕೆರೆಗೆ ನೀರು ತುಂಬಿಸುವ ಕಾಮಗಾರಿ 40 ಕೋಟಿ ರೂ.ನಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.
ಅನುದಾನ ಬಿಡುಗಡೆ ಮಾಡಿಸಲಿ: ಡಿಸೆಂಬರ್ ನಂತರ ಉದ್ಯಾನ ಸೇರಿ ವಿವಿಧ ಕಾಮಗಾರಿಗಳಿಗೆ ಇನ್ನುಳಿದ 100 ಕೋಟಿ ರೂ. ಅನ್ನು ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ರೇವಣ್ಣ ಅವರು ಬಿಡುಗಡೆ ಮಾಡಿಸಿದರೆ ಕಾಮಗಾರಿಯನ್ನು ಹಂತಗಳಲ್ಲಿ ಅನುಷ್ಠಾನ ಗೊಳಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ :ವಿಜೃಂಭಣೆಯ ಯಲ್ಲಮ್ಮ ದೇವಿ ಜಾತ್ರೆ
ಚನ್ನಪಟ್ಟಣ ಕೆರೆ ಅಭಿವೃದ್ಧಿಯ ಮೂಲಕ ನನ್ನ ವಿಧಾನಸಭಾ ಕ್ಷೇತ್ರಕ್ಕೆ 100 ಕೋಟಿ ರೂ. ಹೆಚ್ಚು ಅನುದಾನ ಬರುವುದಿದ್ದರೆ ನಾನೇಕೆ ಬೇಡ ಎನ್ನಲಿ ಎಂದ ಪ್ರೀತಂ ಜೆ.ಗೌಡ, ದೇವೇಗೌಡರ ಮಾರ್ಗ ದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕೆ ಸಹಕರಿಸುವೆ. ದೇವೇಗೌಡರು ಒಂದು ಪಕ್ಷಕ್ಕೆ ಸೀಮಿತವಲ್ಲ. ಅವರು ಜಿಲ್ಲೆಯ ಆಸ್ತಿ ಎಂದು ವಿವರಿಸಿದರು.