Advertisement

31 ವರ್ಷಗಳಿಂದ 14.30 ಕೋಟಿ ರೂ. ನೀರು ಪಾಲು

06:30 AM Apr 22, 2018 | Team Udayavani |

ಕಾಸರಗೋಡು: ಕಾಸರಗೋಡು ನಗರಸಭೆ ಮತ್ತು ಪರಿಸರದ ಗ್ರಾಮ ಪಂಚಾಯತ್‌ಗಳಲ್ಲಿ ಕುಡಿಯುವ ನೀರು ವಿತರಿಸುವ ಜಲ ಅಥೋರಿಟಿಯ ಬಾವಿಕೆರೆ ಯೋಜನೆ ಪ್ರದೇಶದಲ್ಲಿ ತಾತ್ಕಾಲಿಕ ಅಣೆಕಟ್ಟು (ತಡೆಗೋಡೆ)ನಿರ್ಮಿಸಲು ಪಯಸ್ವಿನಿ ಹೊಳೆಯಲ್ಲಿ ಈಗಾಗಲೇ ಹರಿಯ ಬಿಟ್ಟದ್ದು 14.30 ಕೋಟಿ ರೂ. ಉಪ್ಪು ನೀರು ಹೊಳೆಗೆ ಸೇರುವುದನ್ನು ತಡೆಯಲು ಕಳೆದ 31 ವರ್ಷಗಳಿಂದ ಬಾವಿಕೆರೆ ಆಲೂರಿನಲ್ಲಿ ಗೋಣಿ ಚೀಲದಲ್ಲಿ ಮರಳು ತುಂಬಿಸಿ ಹೊಳೆಗೆ ಅಡ್ಡವಿರಿಸುವ ತಾತ್ಕಾಲಿಕ ಅಣೆಕಟ್ಟು ನಿರ್ಮಿಸುವ ಕಾಮಗಾರಿ ಮಾಡಲಾಗುತ್ತಿದ್ದರೂ ಅದರ ಪ್ರಯೋಜನ ಬಳಕೆದಾರರಿಗೆ ಲಭಿಸುತ್ತಿಲ್ಲ ಎಂಬುದು ವಾಸ್ತವ ವಿಚಾರ. ಪ್ರಸ್ತುತ ವರ್ಷ ಫೆಬ್ರವರಿ ತಿಂಗಳ ಪ್ರಥಮ ವಾರದಲ್ಲಿ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾಗಿದ್ದರೂ ದಿನಗಳ ಹಿಂದೆ ಪ್ರತೀ ವರ್ಷದಂತೆ ಈ ವರ್ಷವೂ ತಾತ್ಕಾಲಿಕ ಅಣೆಕಟ್ಟು ನೀರು ಪಾಲಾಗಿದೆ.

Advertisement

ಕರ್ನಾಟಕದಲ್ಲಿ ಸುರಿದ ಉತ್ತಮ ಮಳೆಯಿಂದಾಗಿ ಪಯಸ್ವಿನಿ ಹೊಳೆಯಲ್ಲಿ ನೀರಿನ ಹರಿವು ಉತ್ತಮವಾದುದರಿಂದ ತಾತ್ಕಾಲಿಕ ಅಣೆಕಟ್ಟು ನೀರು ಪಾಲಾಗಲು ಕಾರಣವಾಯಿತು. 1987-88 ರಿಂದ ಪ್ರತೀ ವರ್ಷವೂ ಆಲೂರಿನಲ್ಲಿ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಆರಂಭದ ವರ್ಷದಲ್ಲಿ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲು 86,023 ರೂ. ಗುತ್ತಿಗೆ ನೀಡಲಾಗಿತ್ತು. ಆದರೆ ಇದೀಗ ಈ ಮೊತ್ತ 12,13,572 ರೂ. ಗೇರಿದೆ. ತಾತ್ಕಾಲಿಕ ಅಣೆಕಟ್ಟು ನಿರ್ಮಾಣಕ್ಕೆ ಆರಂಭದಲ್ಲಿ ಬಳಸಿದ ಮೊತ್ತಕ್ಕಿಂತ 15 ಪಟ್ಟು ಅಧಿಕವಾಗಿದೆ. ಖಾಯಂ ಅಣೆಕಟ್ಟು ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆಯಿದ್ದು, ಈಗಾಗಲೇ ಖಾಯಂ ಅಣೆಕಟ್ಟು ನಿರ್ಮಾಣದ ಕಾಮಗಾರಿ ಆರಂಭವಾಗಿದ್ದರೂ ಪದೇ ಪದೇ ತಡೆ ಉಂಟಾಗುತ್ತಿರುವುದರಿಂದ ಕಾಮಗಾರಿ ಆಮೆನಡಿಗೆಯಲ್ಲಿ ಸಾಗುವ ಸ್ಥಿತಿ ಉಂಟಾಗಿದೆ.

ಕಾಸರಗೋಡು ನಗರ ಮತ್ತು ಪರಿಸರದ ಗ್ರಾ.ಪಂ.ಗಳಾದ ಮಧೂರು, ಮುಳಿಯಾರು, ಮೊಗ್ರಾಲ್‌ಪುತ್ತೂರು, ಚೆಂಗಳದ ಸುಮಾರು ಒಂದು ಲಕ್ಷ ಮಂದಿ ನೀರಿಗಾಗಿ ಬಾವಿಕೆರೆ ಯೋಜನೆಯನ್ನು ಆಶ್ರಯಿಸಿದ್ದಾರೆ. ಚೆಮ್ನಾಡ್‌ ಗ್ರಾ. ಪಂ.ನ್ನು ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಿ ಬಾವಿಕೆರೆಯನ್ನು ಆಶ್ರಯಿಸಿ ಕಿಫ್‌ಬಿ ನೆರವಿನೊಂದಿಗೆ ಇನ್ನೊಂದು ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಚಿಂತನೆ ನಡೆದಿದೆ.

ಸಮುದ್ರದ ಉಪ್ಪು ನೀರು ಹೊಳೆಗೆ ನುಗ್ಗದಂತೆ ಪ್ರತೀ ವರ್ಷದಂತೆ ಈ ವರ್ಷವೂ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಕರ್ನಾಟಕದ ವಿವಿಧೆಡೆ ಉತ್ತಮ ಮಳೆಯಾದುದರಿಂದ ಹೊಳೆಯಲ್ಲಿ ನಿರೀಕ್ಷೆಗಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದುದರಿಂದ ಮರಳು ತುಂಬಿದ ತಡೆಗೋಡೆ ನೀರು ಪಾಲಾಯಿತು. ಎಪ್ರಿಲ್‌ ತಿಂಗಳಲ್ಲೇ ನೀರು ಹರಿದು ಬರುವ ಸಾಧ್ಯತೆಯ ಬಗ್ಗೆ ಸಂಬಂಧಪಟ್ಟವರು ನಿರೀಕ್ಷಿಸಿರಲಿಲ್ಲ. ತಡೆಗೋಡೆ ಮುರಿದು ಬಿದ್ದುದರಿಂದ ಉಪ್ಪು ನೀರು ಹೊಳೆಗೆ ಹರಿದು ಬರುವುದು ಬಹುತೇಕ ಖಚಿತವಾಗಿದ್ದು, ಇದನ್ನು ತಡೆಯಲು ಯಾವುದಾದರೊಂದು ಮಾರ್ಗವನ್ನು ಕಂಡುಕೊಳ್ಳಬೇಕಾದ ಸ್ಥಿತಿಯುಂಟಾಗಿದೆ. ಉಪ್ಪು ನೀರು ವಿತರಣೆಯನ್ನು ತಡೆಯಲು ಕಾಸರಗೋಡು ನಗರಸಭೆಯ ವಿವಿಧ ಪ್ರದೇಶಗಳಲ್ಲಿ ವಾಟರ್‌ ಕಿಯೋಸ್ಕ್ಗಳನ್ನು ಸ್ಥಾಪಿಸಿ ಇತರ ಯೋಜನೆಗಳಿಂದ ನೀರು ವಿತರಣೆ ಮಾಡಲು ಯೋಜಿಸಿದೆ.

ಈ ಬಾರಿ 105 ಮೀಟರ್‌ ನೀಳದಲ್ಲಿ ನಾಲ್ಕು ಮೀಟರ್‌
ಅಗಲದಲ್ಲಿ ಮತ್ತು ಎರಡೂವರೆ ಮೀಟರ್‌ ಎತ್ತರದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿತ್ತು. ಗೋಣಿ ಚೀಲದಲ್ಲಿ ಮರಳು ತುಂಬಿಸಿ ತಡೆಗೋಡೆ ನಿರ್ಮಿಸುವುದರಿಂದ ಪರಿಸರ ಸಮಸ್ಯೆಗೆ ಕಾರಣವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ನಿರ್ಮಿಸಿದ ಮರಳು ತುಂಬಿದ ಗೋಣಿ ಚೀಲಗಳು ನೀರಿನಲ್ಲಿ ಹರಿದು ಹೋಗಿದ್ದು ಅವು ನೀರಿನಲ್ಲೇ ಉಳಿದುಕೊಂಡು ಹೊಳೆ ಮಾಲಿನ್ಯಕ್ಕೆ ಕಾರಣವಾಗಿದೆ. ಹಿಂದಿನ ವರ್ಷ ನಿರ್ಮಿಸಿದ ತಡೆಗೋಡೆಯಿಂದ ಸುಮಾರು 400 ಮೀಟರ್‌ ಕೆಳಭಾಗದಲ್ಲಿ ಈ ಬಾರಿ ತಡೆಗೋಡೆ ನಿರ್ಮಿಸಲಾಗಿದೆ.

Advertisement

ಐದು ವರ್ಷಗಳ ಹಿಂದೆ ಈ ಹೊಳೆಗೆ ಖಾಯಂ ಅಣೆಕಟ್ಟು ನಿರ್ಮಾಣ ಕಾಮಗಾರಿ ಆರಂಭಿಸಲಾಗಿದ್ದರೂ, ಈ ವರೆಗೂ ಕಾಮಗಾರಿ ಪೂರ್ತಿಯಾಗಿಲ್ಲ. ಈಗಾಗಲೇ ಇಬ್ಬರು ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ. ಖಾಯಂ ಅಣೆಕಟ್ಟು ನಿರ್ಮಾಣದ ಬಾಕಿ ಕಾಮಗಾರಿಗಾಗಿ 27.75 ಕೋಟಿ ರೂ. ಎಸ್ಟಿಮೇಟ್‌, ಆಡಳಿತಾನುಮತಿ, ಚೀಫ್‌ ಎಂಜಿನಿಯರ್‌ರ ತಾಂತ್ರಿಕ ಅನುಮತಿಯೂ ನೀಡಿ ಟೆಂಡರ್‌ ಮಾಡಿದ್ದರೂ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬುದು ಇನ್ನೂ ವ್ಯಕ್ತವಾಗಿಲ್ಲ. ಖಾಯಂ ಅಣೆಕಟ್ಟು ನಿಗದಿತ ಸ್ಥಳದಲ್ಲೇ ಪೂರ್ತಿಗೊಳಿಸದಿದ್ದಲ್ಲಿ ಮುಂದಿನ ವರ್ಷ ತಾತ್ಕಾಲಿಕ ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ ಎಂದು ಬಾವಿಕೆರೆ ಕ್ರಿಯಾ ಸಮಿತಿ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ.

ತಾತ್ಕಾಲಿಕ ಅಣೆಕಟ್ಟಿಗೆ ವೆಚ್ಚ ಮಾಡಿದ ಹಣ
       ವರ್ಷ              ಮೊತ್ತ
1987-1988 :     86023 ರೂ.
1988-1989 :     96138 ರೂ.
1989-1990 :     115197 ರೂ.
1991-1992 :     201638 ರೂ.
1992-1993 :     234093 ರೂ.
1993-1994 :     208558 ರೂ.
1994-1995 :     233460 ರೂ.
1996-1997 :     215297 ರೂ.
1997-1998 :     240000 ರೂ.
1998-1999 :     267529 ರೂ.
1999-2000 :     175898 ರೂ.
2000-2001 :     167750 ರೂ.
2001-2002 :     191495 ರೂ.
2002-2003 :     344173 ರೂ.
2003-2004 :     349349 ರೂ.
2004-2005 :     286275 ರೂ.
2005-2006 :     283973 ರೂ.
2006-2007 :     602484 ರೂ.
2007-2008 :     422224 ರೂ.
2008-2009 :     480028 ರೂ.
2009-2010 : 638880 ರೂ.
2010-2011 :     602804 ರೂ.
2011-2012 :     901611 ರೂ.
2012-2013 :     998787 ರೂ.
2013-2014 :     993214 ರೂ.
2014-2015 :     1170052 ರೂ.
2015-2016 :     1038306 ರೂ.
2016-2017 :     1186315 ರೂ.
2017-2018 :     1213572 ರೂ.

Advertisement

Udayavani is now on Telegram. Click here to join our channel and stay updated with the latest news.

Next