Advertisement

13 ಕೋಟಿ ರೂ. ಬೆಳೆ ವಿಮೆ ಬಾಕಿ ಬಿಡುಗಡೆ; ವಿಜಯೋತ್ಸವ

02:37 PM Apr 27, 2019 | Team Udayavani |

ಹಾನಗಲ್ಲ: ಜನಪ್ರತಿನಿಧಿಗಳು ರೈತರ ನೆರವಿಗೆ ಬಾರದಿದ್ದರೂ ಧೃತಿಗೆಡದೆ ನಿರಂತರ ಹೋರಾಟದಿಂದ ರೈತರಿಗೆ ನ್ಯಾಯಯುತವಾಗಿ ದೊರಕಬೇಕಿದ್ದ ಬೆಳೆವಿಮೆ ಒದಗಿಸಿಕೊಟ್ಟ ಸಮಾಧಾನ ನಮ್ಮ ಸಂಘಕ್ಕಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.

Advertisement

ಶುಕ್ರವಾರ ಇಲ್ಲಿನ ಮಹಾತ್ಮಾ ಗಾಂಧಿ ವೃತ್ತದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ವತಿಯಿಂದ 2016-17ರ ಬೆಳೆವಿಮೆ ಬಾಕಿ 13 ಕೋಟಿ ರೈತರಿಗೆ ಬಂದಿದ್ದಕ್ಕೆ ಪಟಾಕಿ ಸಿಡಿಸಿ, ಸಿಹಿ ಹಂಚಿ, ಘೋಷಣೆ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸೇರಿದ್ದ ಹಲವಾರು ರೈತರು ತಹಶೀಲ್ದಾರ್‌ ಕಚೇರಿಗೆ ಆಗಮಿಸಿ, ರೈತರ ಸಮಸ್ಯೆಗಳಿಗೆ ಯಾವುದೇ ಇಲಾಖೆ ಸ್ಪಂದಿಸದಿದ್ದರೆ ಹೋರಾಟವೇ ನಮ್ಮ ದಾರಿಯಾಗಲಿದೆ. ರೈತರ ಕೆಲಸಗಳಿಗಾಗಿ ಸತಾಯಿಸಿದರೆ ಸಂಘಟನೆ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆಯ ಘೋಷಣೆಗಳನ್ನು ಕೂಗಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ರೈತರ ಮತಗಳಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ರೈತರ ಸಂಕಷ್ಟಗಳಿಗೆ ಸ್ಪಂದಿಸದಿರುವುದು ವಿಷಾದನೀಯ ಸಂಗತಿ.

ಬೆಳೆವಿಮೆ ವಿಷಯದಲ್ಲಿ ಜನಪ್ರತಿಧಿಗಳು ಸಕಾಲಿಕವಾಗಿ ರೈತರ ಸಹಾಯಕ್ಕೆ ಬರದಿದ್ದರೆ ಅಧಿಕಾರಿಗಳ ಆಟದಿಂದಾಗಿ ರೈತ ಸಮೂಹ ಹಲವು ನಷ್ಟ ಅನುಭವಿಸಬೇಗುವುದು. 2016-17ರ ಸಾಲಿನ ಬೆಳೆವಿಮೆ ಬಾಕಿ ಉಳಿಸಿಕೊಂಡಿದ್ದ 13 ಕೋಟಿ ರೂ. ಪಡೆಯಲು ನಿರಂತ ಹೋರಾಟ ನಡೆಸುವ ಸ್ಥಿತಿ ನಿರ್ಮಾಣವಾಯಿತು. ಕೊನೆಗೂ ಹೋರಾಟದಿಂದಲೇ ನ್ಯಾಯ ಸಿಕ್ಕಿತೇ ಹೊರತು ಜನಪ್ರತಿನಿಧಿಗಳ ಸಹಕಾರದಿಂದಲ್ಲ. ಒಂದು ವೇಳೆ ರಾಜಕಾರಣಿಗಳು ಸೂಕ್ತವಾಗಿ ಸ್ಪಂದಿಸಿದ್ದರೆ ಯಾವಾಗಲೋ ಈ ಹಣ ಪಡೆಯಬಹುದಾಗಿತ್ತು. ಆದರೆ, ನಮ್ಮನ್ನಾಳುವ ನಾಯಕರಲ್ಲಿ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದರು.

ಬ್ಯಾಡಗಿ ತಾಲೂಕಿನ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ತಾಲೂಕು ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಸೋಮಣ್ಣ ಜಡೆಗೊಂಡರ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಘವೇಂದ್ರ ಹುನುಗಂದ, ಮೋದಿನಸಾಬ್‌ ನಾಗರವಳ್ಳಿ, ರಾಮನಗೌಡ ಪಾಟೀಲ, ಕರಸಬಪ್ಪ ಮಾಕೊಪ್ಪ, ಚನ್ನಪ್ಪ ಪಾವಲಿ, ಶ್ರೀಕಾಂತ ದುಂಡಣ್ಣನವರ ಸೇರಿದಂತೆ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next