ಆಳಂದ: ಕುಡಿಯುವ ನೀರು, ರಸ್ತೆ, ಅಂತರ್ಜಲ ಹೆಚ್ಚಳ ಕಾಮಗಾರಿ ಸೇರಿದಂತೆ ಇನ್ನಿತರ ಹಲವು ಅಭಿವೃದ್ಧಿ ಕೆಲಸ-ಕಾರ್ಯಗಳಿಗೆ ಇದುವರೆಗೂ 1200 ಕೋಟಿ ರೂ. ಗಿಂತ ಹೆಚ್ಚಿನ ಅನುದಾನ ಕ್ಷೇತ್ರಕ್ಕೆ ಹರಿದು ಬಂದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಡುಗೆ ಎಂದು ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಮಿನಿ ವಿಧಾನಸೌಧ ನಿರ್ಮಾಣ ಮತ್ತು ವಿವಿಧ ಕಾಮಗಾರಿಗಳ ಅಡಿಗಲ್ಲು, ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಮಾತುಕೊಟ್ಟಂತೆ ನಡೆದುಕೊಂಡಿದ್ದಾರೆ. ರಾಜ್ಯದಲ್ಲಿ ರೈತಪರ, ಜನಪರ ಆಡಳಿತ ನೀಡಿದ್ದಾರೆ ಎಂದರು. ಕಾಂಗ್ರೆಸ್ ಸಂಸದೀಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಜಿಲ್ಲೆಯಲ್ಲಿ ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ. ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ 371ನೇ ಕಲಂ ಜಾರಿಗೆ ತಂದ ಖರ್ಗೆ, ಧರ್ಮಸಿಂಗ್, ವೈಜನಾಥ ಪಾಟೀಲ ಅವರ ಪರಿಶ್ರಮವನ್ನು ಜನ ಮರೆಯುವುದಿಲ್ಲ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣ ಪ್ರಕಾಶ ಪಾಟೀಲ ಮಾತನಾಡಿ, ಶಾಸಕ ಬಿ.ಆರ್. ಪಾಟೀಲ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಜನಪರ ಕಾಳಜಿ ವಹಿಸಿದ್ದಾರೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಅಫಜಲಪುರ ಶಾಸಕ ಮಾಲೀಕಯ್ಯ ಗುತ್ತೇದಾರ, ಶಾಸಕ ಜಿ. ರಾಮಕೃಷ್ಣ, ಔಸಾ ಶಾಸಕ ಬಸವರಾಜ ಪಾಟೀಲ ಮುರುಮ, ಅಕ್ಕಲಕೋಟ ಶಾಸಕ ಸಿದ್ರಾಮ ಮೇತ್ರೆ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗಮದ ಅಧ್ಯಕ್ಷ ಇಲ್ಲಿಯಾಸ್ ಭಾಗವಾನ್, ಮಾಜಿ ಶಾಸಕ ಅಲ್ಲಂಪ್ರಭು ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿಠಲರಾವ್ ಪಾಟೀಲ, ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಜಿಪಂ ಸದಸ್ಯ ಸಿದ್ದರಾಮ ಪ್ಯಾಟಿ, ಮಲ್ಲೇಶಪ್ಪ ಬಿರಾದಾರ ಪಾಲ್ಗೊಂಡಿದ್ದರು.
ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಅಭಾವದಿಂದಾಗಿ ಅಲ್ಪಾವಧಿ ಬೆಳೆ ಎಳ್ಳು, ಹೆಸರು, ಉದ್ದು ಬೆಳೆಗಳ ಹಾನಿಯಾಗಿವೆ. ಆದ್ದರಿಂದ ಪರಿಹಾರ ನೀಡಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪುರ ಒತ್ತಾಯಿಸಿದರು. ಪಟ್ಟಣದ ಹೊರವಲಯದಲಿ ರವಿವಾರ ಉದ್ದೇಶಿತ ಮಿನಿ ವಿಧಾನಸೌಧ ಅಡ್ಡಿಗಲ್ಲು ನೆರವೇರಿಸಿದ್ದ ಸ್ಥಳದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬೆಳೆ ಹಾನಿಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಬಾರದೆ ದಿನದೊಡುತ್ತಿರುವುದರಿಂದ ಇನ್ನುಳಿದ ತೊಗರಿ ಬೆಳೆ ಜಿಲ್ಲೆಯಲ್ಲಿ 3.50ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿ ಮಳೆಯಿಲ್ಲದೆ ಬೆಳೆ ಬೆಳವಣಿಗೆ ಕುಂಠಿತವಾಗತೊಡಗಿದೆ. ಮಳೆ ಒಂದು ವಾರದ ಮುಂದೂಡಿದರೆ ಬೆಳೆ ಕುಂಠಿತವಾಗಲಿದೆ. ಕೂಡಲೇ ಪರಿಹಾರ ಘೋಷಿಸಿ ವಿತರಣೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.