ಭೋಪಾಲ್: ಸಾಮಾನ್ಯವಾಗಿ ರಾಷ್ಟ್ರೀಯ ಸ್ಮಾರಕ, ಐತಿಹಾಸಿಕ ತಾಣಗಳಿಗೆ ಬಿಗಿ ಭದ್ರತೆ ಒದಗಿಸುವುದರ ಬಗ್ಗೆ ಆಗಾಗ ವರದಿಯಾಗುತ್ತಿರುತ್ತದೆ. ಆದರೆ ಮಧ್ಯಪ್ರದೇಶದ ಸಲಾಮತ್ ಪುರದ ಬೆಟ್ಟದ ಮೇಲೊಂದು ವಿಶಿಷ್ಟವಾದ ಮರವಿದೆ. ಪ್ರಸಿದ್ಧ ತಾಣವಾದ ಸಾಂಚಿಯಿಂದ ಕೇವಲ 8ಕಿಲೋ ಮೀಟರ್ ದೂರದಲ್ಲಿರುವ “ಅಶ್ವತ್ಥ ಮರ” ಭಾರತದ ಮೊತ್ತ ಮೊದಲ VVIP ಮರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭದ್ರತೆಗಾಗಿ ವರ್ಷಕ್ಕೆ 12 ಲಕ್ಷ ರೂ. ಖರ್ಚು!
ಮಧ್ಯಪ್ರದೇಶ ಸರ್ಕಾರ ಈ ಪವಿತ್ರ ಅಶ್ವತ್ಥ ಮರದ ನಿರ್ವಹಣೆ ಮತ್ತು ರಕ್ಷಣೆಗಾಗಿ ವಾರ್ಷಿಕವಾಗಿ 12 ಲಕ್ಷ ರೂಪಾಯಿಯನ್ನು ವಿನಿಯೋಗಿಸುತ್ತಿದೆ. ಶ್ರೀಲಂಕಾದ ಅಂದಿನ ಅಧ್ಯಕ್ಷರಾಗಿದ್ದ ಮಹೀಂದ ರಾಜಪಕ್ಸ ಅವರು ನೆಟ್ಟ ಈ ಅಶ್ವತ್ಥ ಗಿಡವನ್ನು ಶ್ರೀಲಂಕಾದಿಂದ ತರಲಾಗಿತ್ತು.
ಯಾಕಿಷ್ಟು ಭದ್ರತೆ:
ಬಹುತೇಕ ಕಡೆ ಅಶ್ವತ್ಥ ಮರ ಇರುವುದು ಸಾಮಾನ್ಯ. ಆದರೆ ಮಧ್ಯಪ್ರದೇಶದ ಸಲಾಮತ್ ಪುರ್ ನ ಬೆಟ್ಟದ ಮೇಲಿರುವ ಈ ಅಶ್ವತ್ಥ ಮರಕ್ಕೆ ಇಷ್ಟೊಂದು ವೆಚ್ಚದಲ್ಲಿ ಭದ್ರತೆ ನೀಡಿರುವುದು ಯಾಕೆ ಎಂಬ ವಿಷಯ ನಿಮ್ಮಲ್ಲೂ ಮೂಡಿರಬಹುದು. ಅದಕ್ಕೆ ಕಾರಣ…ಈ ವಿಶೇಷ ಅಶ್ವತ್ಥ ಮರವು ಗೌತಮ ಬುದ್ಧನು ಜ್ಞಾನೋದಯ ಪಡೆದ ಅದೇ ಬೋಧಿ ವೃಕ್ಷದೊಂದಿಗೆ ಸಂಬಂಧ ಹೊಂದಿರುವುದು. ಇದು ಬೌದ್ಧ ಧರ್ಮದ ಅನುಯಾಯಿಗಳಿಗೆ ಪವಿತ್ರವಾದ ಮರವಾಗಿದೆ.
ಸಾಂಚಿ ಬೌದ್ಧ ವಿಶ್ವವಿದ್ಯಾಲಯದ ಬೌದ್ಧ ಸರ್ಕ್ಯೂಟ್ ನ ನಿರ್ವಹಣೆಗಾಗಿ ಗೊತ್ತುಪಡಿಸಿದ ಬೆಟ್ಟದ ಮೇಲೆ ಸ್ಥಾಪಿಸಿರುವ ಈ ಅಶ್ವತ್ಥ ಮರಕ್ಕೆ ದಿನದ 24 ಗಂಟೆಯೂ ಭದ್ರತೆಯನ್ನು ಹೊಂದಿದೆ. ಮರದ ಒಂದು ಎಲೆಗೂ ಧಕ್ಕೆಯಾಗದ ರೀತಿಯಲ್ಲಿ ನಾಲ್ಕು ಭದ್ರತಾ ಗಾರ್ಡ್ ಗಳನ್ನು ರಕ್ಷಣೆಗೆ ನಿಯೋಜಿಸಲಾಗಿದೆ. ಈ ಪವಿತ್ರ ಅಶ್ವತ್ಥ ಮರದ ಸುತ್ತ 15 ಅಡಿ ಎತ್ತರದ ಕಬ್ಬಿಣದ ಬಲೆಯನ್ನು ಕಟ್ಟಲಾಗಿದ್ದು, ರಜಾ ದಿನ ಸೇರಿದಂತೆ ಹಬ್ಬದ ಸಂದರ್ಭದಲ್ಲಿಯೂ ನಿರಂತರವಾಗಿ ಭದ್ರತೆ ನೀಡಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಈ ಮರವು ಬೋಧಗಯಾದಲ್ಲಿ ಬುದ್ಧನ ಜ್ಞಾನೋದಯವನ್ನು ಪ್ರತಿನಿಧಿಸುತ್ತದೆ. ಮೂಲ ಮರದ ಒಂದು ಭಾಗವನ್ನು ಅಶೋಕ ಚಕ್ರವರ್ತಿ ಮಗಳು ಸಂಘಮಿತ್ರ ಶ್ರೀಲಂಕಾದ ಅನುರಾಧಪುರಕ್ಕೆ ತಂದು ನೆಟ್ಟಿರುವುದಾಗಿ ಬೌದ್ಧ ಧರ್ಮದ ಉಪನ್ಯಾಸಕ ಚಂದ್ರರತನ್ ಅವರು ತಿಳಿಸಿರುವುದಾಗಿ ವರದಿ ವಿವರಿಸಿದೆ. ಸಾಂಚಿಯ ಬೌದ್ಧ ಯೂನಿರ್ವಸಿಟಿ ಭೂಮಿಯಲ್ಲಿರುವ ಈ ಅಶ್ವತ್ಥ ಮರವು ಕೂಡಾ ಬೋಧಗಯಾದ ಮರದ ಒಂದು ಭಾಗವಾಗಿದೆ. ಅದಕ್ಕಾಗಿ ಅದು ಹೆಚ್ಚು ಪಾವಿತ್ರ್ಯತೆ ಹೊಂದಿದೆ ಎಂದು ತಿಳಿಸಿದ್ದಾರೆ.
ಈ ಪವಿತ್ರ ಅಶ್ವತ್ಥ ಮರದ ರಕ್ಷಣೆಗಾಗಿ ರಾಜ್ಯ ಸರ್ಕಾರವು ನಾಲ್ಕು ಮಂದಿ ಭದ್ರತಾ ಗಾರ್ಡ್ಸ್ ಗಳಿಗೆ ತಿಂಗಳಿಗೆ ತಲಾ 26,000 ಸಾವಿರ ರೂಪಾಯಿ ಸಂಬಳ ನೀಡುತ್ತಿದೆ. ಭದ್ರತೆಗಾಗಿ ತಗಲುವ ಒಂದು ತಿಂಗಳ ವೆಚ್ಚ 1,04,000 ಸಾವಿರ ರೂಪಾಯಿಯಾಗಿದ್ದು, ವಾರ್ಷಿಕವಾಗಿ ಮಧ್ಯಪ್ರದೇಶ ಸರ್ಕಾರ 12.48 ಲಕ್ಷ ರೂಪಾಯಿ ವಿನಿಯೋಗಿಸುತ್ತಿದೆ.