ಕೊಪ್ಪಳ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿಂದಲೋ..? ಅಥವಾ ಗ್ರಾಪಂ ಸಿಬ್ಬಂದಿಗಳ ವಿಳಂಬ ನೀತಿಯಿಂದಲೋ ? ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಾತಿ ನಡೆಯುತ್ತಿಲ್ಲ. ಅಂಕಿ-ಅಂಶಗಳ ಲೆಕ್ಕಾಚಾರದಲ್ಲಿ 153 ಗ್ರಾಪಂಗಳಲ್ಲಿ 11 ಕೋಟಿಯಷ್ಟು ತೆರಿಗೆ ಬರುವುದು ಬಾಕಿಯಿದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಜನರಿಂದ ಸಂಗ್ರಹ ಮಾಡಿದ ತೆರಿಗೆಯಿಂದಲೇ ಆಡಳಿತ ನಡೆಸಬೇಕಾದ ಸ್ಥಿತಿಯಿದೆ. ಸರ್ಕಾರ ಅಲ್ಪ ಅನುದಾನ ಮಂಜೂರು ಮಾಡಿದರೆ, ಉಳಿದ ಹಣ ವಾಣಿಜ್ಯ ಮಳಿಗೆ, ನೀರಿನ ಕರ, ಸ್ವಚ್ಛತಾ ಕರ, ಬಾಡಿಗೆ, ಕಟ್ಟಡ, ಮನೆ ಕರ ಸೇರಿ ಸೇರಿದಂತೆ ಇತರೆ ತೆರಿಗೆಗಳನ್ನು ಗ್ರಾಪಂಗಳೇ ಸಾರ್ವಜನಿಕರಿಂದ ವಸೂಲಿ ಮಾಡಬೇಕಿದೆ. ಪ್ರತಿ ವರ್ಷ ಮನೆ-ಮನೆಗೆ ತೆರಳಿ ಕರ ವಸೂಲಿ ಮಾಡಬೇಕಾಗಿದ್ದರೂ ಗ್ರಾಪಂಗಳಿಂದ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ವಸೂಲಿ ನಡೆದಿಲ್ಲ.
11.79 ಕೋಟಿ ರೂ. ಬಾಕಿ: ಅಂಕಿ-ಅಂಶಗಳ ಲೆಕ್ಕಾಚಾರ ಗಮನಿಸಿದರೆ, ಜಿಲ್ಲೆಯಲ್ಲಿನ 153 ಗ್ರಾಪಂನಲ್ಲಿ 23 ಕೋಟಿ ರೂ. ತೆರಿಗೆ ವಸೂಲಿ ಮಾಡಬೇಕಿತ್ತು. ಮಾರ್ಚ್-2019ರ ಅಂತ್ಯಕ್ಕೆ 11.25 ಕೋಟಿ ರೂ. ವಸೂಲಿ ಮಾಡಲಾಗಿದೆ. ಅಂದರೆ ಇನ್ನೂ 11.79 ಕೋಟಿ ರೂ. ನಷ್ಟು ವಸೂಲಿ ಮಾಡಬೇಕಿದೆ. ಕೊಪ್ಪಳ ತಾಲೂಕಿನಲ್ಲಿ 4.21 ಕೋಟಿ, ಗಂಗಾವತಿ ತಾಲೂಕಿನಲ್ಲಿ 3.39 ಕೋಟಿ, ಯಲಬುರ್ಗಾ 1.89 ಕೋಟಿ, ಕುಷ್ಟಗಿ ತಾಲೂಕಿನಲ್ಲಿ 1.75 ಕೋಟಿ ವಸೂಲಿ ಬಾಕಿಯಿದೆ.
ಗಂಗಾವತಿ, ಯಲಬುರ್ಗಾ ಹೆಚ್ಚು: ವಿಶೇಷವೆಂದರೆ ಜಿಲ್ಲೆಯಲ್ಲಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನಲ್ಲಿಯೇ ಹೆಚ್ಚಿನ ಮಟ್ಟದ ತೆರಿಗೆ ಬರಬೇಕಿದೆ. ಗಂಗಾವತಿಯಲ್ಲಿ ಹಲವು ರೈಸ್ ಮಿಲ್ಗಳು, ವಿವಿಧ ಉದ್ಯಮಗಳಿವೆ. ಅವರೇ ಸಕಾಲಕ್ಕೆ ತೆರಿಗೆ ಕಟ್ಟಿಲ್ಲ. ಇನ್ನೂ ಕೊಪ್ಪಳ ತಾಲೂಕಿನಲ್ಲೂ ಹಲವು ಉದ್ಯಮಗಳು ಬಾಕಿ ಉಳಿಸಿಕೊಂಡಿದ್ದಾರೆ. ಇಲ್ಲಿ ಗ್ರಾಪಂ ಸಿಬ್ಬಂದಿಗಳ ನಿರಾಸಕ್ತಿಯೋ..? ಜನರೇ ತೆರಿಗೆ ಕಟ್ಟಲು ಮನಸ್ಸು ಮಾಡುತ್ತಿಲ್ಲವೋ| ಜಿಪಂಗೆ ತಿಳಿಯದಂತಾಗಿದೆ.
ಇನ್ನೂ ಸರ್ಕಾರ ಗ್ರಾಪಂ ಪಿಡಿಒ ಹೊರತು ಪಡಿಸಿದರೆ ಉಳಿದಂತೆ ಉಳಿದ ನೌಕರಿಗೆ ಪೂರ್ಣ ಪ್ರಮಾಣದಲ್ಲಿ ವೇತನ ಬಿಡುಗಡೆ ಮಾಡಲ್ಲ. ಸ್ಥಳೀಯ ಸಂಸ್ಥೆಗಳಿಂದ ಸಂಗ್ರಹವಾದ ತೆರಿಗೆಯಲ್ಲೇ ವೇತನ ಬಿಡುಗಡೆ ಮಾಡಬೇಕಿದೆ. ಜೊತೆಗೆ ಆಡಳಿತ ವೆಚ್ಚ, ಇತರೆ ಕಾರ್ಯಕ್ಕೂ ಅನುದಾನ ಮೀಸಲಿಟ್ಟು ಗ್ರಾಪಂನಡಿ ಬರುವ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸಬೇಕಿದೆ.
ಇನ್ನೂ ಜಿಲ್ಲೆಯಲ್ಲಿ ಬರದ ಪರಿಸ್ಥಿತಿಯಿಂದಾಗಿ ಜನರ ಬಳಿ ಹಣವಿಲ್ಲ. ದುಡಿಮೆ ಇಲ್ಲದೇ ಅವರೇ ಅನ್ಯ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಇನ್ನೆಲ್ಲಿಂದ ತೆರಿಗೆ ಕಟ್ಟಬೇಕು ಎನ್ನುವುದು ಜನರ ಮಾತಾಗಿದೆ. ಹಾಗಾಗಿ ಗ್ರಾಪಂಗಳು ತೆರಿಗೆ ವಸೂಲಾತಿ ಆಗುತ್ತಿಲ್ಲ ಎಂದು ನರಳಾಡುತ್ತಿವೆ. ಈ ಎಲ್ಲ ಲೆಕ್ಕಾಚಾರದಲ್ಲಿ ತೆರಿಗೆ ವಸೂಲಾತಿಯಲ್ಲಿ ಕೊಪ್ಪಳ ತಾಲೂಕು ಶೇ.64ರಷ್ಟು ಪ್ರಗತಿ ಸಾಧಿಸಿದ್ದರೆ, ಗಂಗಾವತಿ ಶೇ.47, ಯಲಬುರ್ಗಾ-ಶೇ.36, ಕುಷ್ಟಗಿ ಶೇ.43ರಷ್ಟು ಸೇರಿದಂತೆ ಒಟ್ಟಾರೆ ಜಿಲ್ಲಾದ್ಯಂತ ಶೇ.48ರಷ್ಟು ಪ್ರಗತಿ ಸಾಧಿಸಿದೆ. ಅಂದರೆ ಶೇ.50ರಷ್ಟು ಪ್ರಗತಿ ಸಾಧಿಸಲು ಹರಸಾಹಸ ಪಡುವಂತಾಗಿದೆ.
•ದತ್ತು ಕಮ್ಮಾರ