Advertisement

Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!

11:17 AM Nov 02, 2024 | ವಿಷ್ಣುದಾಸ್ ಪಾಟೀಲ್ |

ರಾಜಕೀಯ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ರಾಜಕೀಯ ಪಕ್ಷಗಳಿಂದ ಎಷ್ಟು ಹಣ ಪಡೆಯುತ್ತಿದ್ದರು ಎನ್ನುವ ಕುತೂಹಲ ಎಲ್ಲರದ್ದಾಗಿತ್ತು. ರಾಜಕೀಯ ಪಕ್ಷಗಳು ಎಷ್ಟು ಹಣ ಅವರಿಗೆ ನೀಡುತ್ತಿದ್ದವು ಎನ್ನುವುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿತ್ತು. ಎಲ್ಲ ಪಕ್ಷಗಳೊಂದಿಗೆ ನಂಟು ಹೊಂದಿದ್ದ ಪ್ರಶಾಂತ್ ಅವರು ತಮ್ಮದೇ ಪಕ್ಷ ಕಟ್ಟಿದಾಗ ಆರ್ಥಿಕ ಸಂಪನ್ಮೂಲ ಹೇಗೆ ಕ್ರೋಢೀಕರಿಸುತ್ತಾರೆ ಎನ್ನುವ ಪ್ರಶ್ನೆಯನ್ನೂ ಹಲವರು ಮುಂದಿಟ್ಟಿದ್ದಾರೆ. ಬಿಹಾರದಂತಹ ರಾಜ್ಯದಲ್ಲಿ ಚುನಾವಣೆಯನ್ನು ಕೇವಲ ಸಿದ್ದಾಂತಗಳ ಮೂಲಕ ಎದುರಿಸುವುದು ಸುಲಭವಲ್ಲ ಎನ್ನುವುದು ಎಲ್ಲರಿಗೂ ತಿಳಿದ ಸತ್ಯ. ಈಗ ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ಅವರು ಪಡೆಯುತ್ತಿದ್ದ ದೊಡ್ಡ ಮೊತ್ತದ ವಿಚಾರ ಬಹಿರಂಗವಾಗಿದೆ.

Advertisement

ಚುನಾವಣಾ ತಂತ್ರಜ್ಞ ಜನ್ ಸುರಾಜ್ ಪಕ್ಷದ ಸಂಚಾಲಕ ಪ್ರಶಾಂತ್ ಕಿಶೋರ್ , ಚುನಾವಣಾ ತಂತ್ರಗಾರರಾಗಿ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರಿಗೆ ಸಲಹೆ ನೀಡಲು 100 ಕೋಟಿ ರೂ.ಗೂ ಅಧಿಕ ಶುಲ್ಕ ಪಡೆಯುತ್ತಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ.

ಅಕ್ಟೋಬರ್ 31 ರಂದು ಬಿಹಾರದಲ್ಲಿ ಉಪಚುನಾವಣೆಯ ಪ್ರಚಾರ ಮಾಡುವಾಗ ಕಿಶೋರ್ ಅವರೇ ಚುನಾವಣಾ ತಂತ್ರಗಾರರಾಗಿದ್ದ ವೇಳೆ ತಾವು ಪಡೆಯುತ್ತಿದ್ದ ಶುಲ್ಕವನ್ನು ಬಹಿರಂಗಪಡಿಸಿದ್ದಾರೆ.ಬೆಳಗಂಜ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದವರೂ ಸೇರಿದ್ದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಜನರು ತಮ್ಮ ಪ್ರಚಾರಗಳಿಗೆ ಹೇಗೆ ಹಣ ನೀಡುತ್ತಾರೆ ಎಂದು ಜನರು ಆಗಾಗ್ಗೆ ಕೇಳುತ್ತಾರೆ ಎಂದು ವಿವರ ನೀಡಿದರು.

“ವಿವಿಧ ರಾಜ್ಯಗಳಲ್ಲಿ ಹತ್ತು ಸರಕಾರಗಳು ನನ್ನ ಕಾರ್ಯತಂತ್ರಗಳ ಮೇಲೆ ನಡೆಯುತ್ತಿವೆ. ನನ್ನ ಪ್ರಚಾರಕ್ಕಾಗಿ ಟೆಂಟ್‌ಗಳು ಮತ್ತು ಮೇಲಾವರಣಗಳನ್ನು ಹಾಕಲು ನನ್ನ ಬಳಿ ಸಾಕಷ್ಟು ಹಣವಿಲ್ಲ ಎಂದು ನೀವು ಭಾವಿಸುತ್ತೀರಾ? ನಾನು ದುರ್ಬಲ ಎಂದು ನೀವು ಭಾವಿಸುತ್ತೀರಾ? ಬಿಹಾರದಲ್ಲಿ, ನನ್ನಂತೆ ಯಾರೂ ಶುಲ್ಕವನ್ನು ಕೇಳಿಲ್ಲ. ನಾನು ಕೇವಲ ಒಂದು ಚುನಾವಣೆಯಲ್ಲಿ ಯಾರಿಗಾದರೂ ಸಲಹೆ ನೀಡಿದರೆ, ನನ್ನ ಶುಲ್ಕ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚು, ಮುಂದಿನ ಎರಡು ವರ್ಷಗಳವರೆಗೆ ನಾನು ಅಂತಹ ಒಂದು ಚುನಾವಣಾ ಸಲಹೆಯೊಂದಿಗೆ ನನ್ನ ಪ್ರಚಾರವನ್ನು ಮುಂದುವರಿಸಬಹುದು” ಎಂದರು.

Advertisement

ಜನ್ ಸುರಾಜ್ ಪಕ್ಷ ಮೊದಲ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದು, ಬಿಹಾರದ ನಾಲ್ಕು ವಿಧಾನಸಭಾ ಸ್ಥಾನಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬೆಳಗಂಜ್‌ನಿಂದ ಮೊಹಮ್ಮದ್ ಅಮ್ಜದ್, ಇಮಾಮ್‌ಗಂಜ್‌ನಿಂದ ಜಿತೇಂದ್ರ ಪಾಸ್ವಾನ್, ರಾಮಗಢದಿಂದ ಸುಶೀಲ್ ಕುಮಾರ್ ಸಿಂಗ್ ಕುಶ್ವಾಹಾ ಮತ್ತು ತರಾರಿಯಿಂದ ಕಿರಣ್ ಸಿಂಗ್ ಪಕ್ಷದ ಅಭ್ಯರ್ಥಿಯಾಗಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ತಮ್ಮ ಜ್ಞಾನದ ಮೂಲಕ ಮೊದಲು ಬಿಜೆಪಿಗೆ ರಾಜಕೀಯ ತಂತ್ರಗಾರರಾಗಿ ಕೆಲಸ ಮಾಡಿದ್ದರು. 2011 ರಲ್ಲಿ ನರೇಂದ್ರ ಮೋದಿ ಅವರಿಗೆ ಹತ್ತಿರವಾಗಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗುವ ರಣತಂತ್ರಗಳ ಸಲಹೆ ನೀಡಿ ದೇಶದ ಗಮನ ಸೆಳೆದಿದ್ದರು.2014 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಂಪೂರ್ಣ ಬಹುಮತವನ್ನು ಗಳಿಸಿದಾಗ ವ್ಯಾಪಕವಾಗಿ ಖ್ಯಾತಿಗೆ ಬಂದರು. ಆ ಬಳಿಕ ಬೇರೆ ಪಕ್ಷಗಳೂ ಪ್ರಶಾಂತ್ ಕಿಶೋರ್ ಅವರ ಮೇಲೆ ಕಣ್ಣು ಹಾಕಿದವು. ಜೆಡಿ(ಯು), ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ವೈಎಸ್‌ಆರ್‌ಸಿಪಿ, ಡಿಎಂಕೆ ಮತ್ತು ಟಿಎಂಸಿಗಾಗಿಯೂ ಚುನಾವಣ ಕೆಲಸ ಮಾಡಿ ಈಗ ತಮ್ಮದೇ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಎನ್ ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟದ ಎದುರು ಅವರು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ? ಯಾರಿಗೆ ಲಾಭ ಮಾಡಿಕೊಡಲಿದ್ದಾರೆ? ಮತದಾರರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next