Advertisement

ಎತ್ತಿನಹೊಳೆ: ಕೆರೆ ಪುನಶ್ಚೇತನಕ್ಕೆ 100 ಕೋಟಿ ರೂ.

11:52 AM Jul 02, 2019 | Suhan S |

ಕೋಲಾರ: ಎತ್ತಿನಹೊಳೆ ಯೋಜನೆಯ ನೀರು ಹರಿಯುವ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರ 100 ಕೋಟಿ ರೂ. ಬಿಡುಗಡೆ ಮಾಡಿದೆ. ಅದೇ ರೀತಿ ಜಲಧಾರೆ ಯೋಜನೆ ಇನ್ನು ಅಂತಿಮಗೊಂಡಿಲ್ಲ. ಇದಕ್ಕೆ ಸದನದ ಅನುಮೋದನೆ ಸಿಕ್ಕಿದ ಕೂಡಲೇ ಡಿಸೆಂಬರ್‌ ಅಂತ್ಯದೊಳಗೆ ಟೆಂಡರ್‌ ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ, ತಿಳಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಜಲಧಾರೆ ಯೋಜನೆ ಅನುಷ್ಠಾನ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎತ್ತಿನಹೊಳೆ ನೀರು ಮುಂದಿನ ದಿನಗಳಲ್ಲಿ ಹರಿದು ಬರಲಿದೆ, ಈಗಾಗಲೇ ಕೆ.ಸಿ.ವ್ಯಾಲಿ ನೀರು ಹರಿಯುತ್ತಿರುವುದರಿಂದ ಎರಡೂ ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಕುಡಿಯುವ ನೀರಿಗೆ ಶಾಶ್ವತ ಪರಿಹಾರ: ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ರೂಪಿಸಿರುವ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ವಿವಿಧ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದು, ನೀರು ಪೋಲಾಗದಂತೆ ಹಂಚಿಕೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ವಿವರಿಸಿದರು.

ಆದ್ಯತೆ ಮೇಲೆ ನೀರು ಪೂರೈಕೆ: ಜಿಲ್ಲೆಗೆ ಕುಡಿಯುವ ನೀರಿಗಾಗಿ ಯರಗೋಳ್‌ ಹಾಗೂ ಎತ್ತಿನಹೊಳೆ ಯೋಜನೆ ಅನುಷ್ಠಾನಗೊಂಡಿದ್ದು, ಎರಡೂ ಯೋಜನೆಗಳ ಕಾಮಗಾರಿ ಪ್ರಗತಿಯಲಿದೆ. ಇದರಿಂದ ಜಿಲ್ಲೆಯ ಕೆಲ ದೊಡ್ಡ ಕೆರೆಗಳಿಗೆ ನೀರು ಹರಿಸಿಕೊಂಡು ಸಮಸ್ಯೆಯಿರುವ ಗ್ರಾಮಗಳಿಗೆ, ಪಟ್ಟಣ, ನಗರಗಳಿಗೆ ಆದ್ಯತೆ ಮೇರೆ ಹರಿಸಲಾಗುವುದು ಎಂದು ಹೇಳಿದರು.

136 ಕೆರೆಗಳಿಗೆ ನೀರು: ಎತ್ತಿನಹೊಳಗೆ ಯೋಜನೆಯಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹರಿಸಲಾಗುತ್ತಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳ 136 ಕೆರೆಗಳಿಗೆ ಹರಿಸಲಾಗುವುದು. ಅದೇ ರೀತಿ ಯರಗೋಳ್‌ ಯೋಜನೆಯಿಂದಲೂ ಜಿಲ್ಲೆಯ ಮೂರು ತಾಲೂಕುಗಳಿಗೆ ಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ನೀರಿನ ಸಮಸ್ಯೆ ಕೊನೆಗಾಣಿಸಿ: ಕೆಜಿಎಫ್‌ ಶಾಸಕಿ ರೂಪಾ ಶಶಿಧರ್‌, ಕೆಜಿಎಫ್‌ ನಗರಕ್ಕೆ ಬೇತಮಂಗಲ ಕೆರೆಯಿಂದ ನೀರು ಹರಿಯುತ್ತಿತ್ತು. ಅದನ್ನು ಗ್ರಾಮೀಣ ಭಾಗಕ್ಕೂ ವಿಸ್ತರಿಸಬೇಕು. ಈ ಕೆರೆಗೆ ಎತ್ತಿನಹೊಳೆ ಯೋಜನೆ ನೀರನ್ನು ಹರಿಸುವ ಮೂಲಕ ಕುಡಿಯುವ ನಿರಿನ ಸಮಸ್ಯೆ ಕೊನೆಗಾಣಿಸಬೇಕು ಎಂದು ಮನವಿ ಮಾಡಿದರು. ಶಾಸಕರ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣಬೆೈರೇಗೌಡ, ಯೋಜನೆಯನ್ನು ಅಂತಿಮಗೊಳಿಸಲ್ಲ. ಬದಲಾವಣೆ ಇದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕ ಕೆ.ವೈ.ನಂಜೇಗೌಡ, ಈಚೆಗೆ ನರಸಾಪುರ ಕೆರೆಯಿಂದ ಮಾಲೂರು ತಾಲೂಕಿನ ಶಿವಾರಪಟ್ಟಣ ಕೆರೆಗೆ ನೀರು ಪಂಪು ಮಾಡುವುದಕ್ಕೆ ಚಾಲನೆ ನೀಡಲಾಯಿತು. ಈಗ ನಿಲ್ಲಿಸಿರುವುದರಿಂದ ಜನಕ್ಕೆ ತಪ್ಪು ಮಾಹಿತಿ ಹೋಗಿದೆ. ಕೇವಲ ಕೋಲಾರ ಕೆರೆಗಳು ಮಾತ್ರ ತುಂಬಿದರೆ ಬೇರೆ ತಾಲೂಕಿನ ಕೆರೆಗಳು ತುಂಬುವುದು ಬೇಡವೇ ಎಂದು ಪ್ರಶ್ನಿಸಿದರು.

ಎಲ್ಲರಿಗೂ ನೀರು ಹರಿಯುತ್ತೆ: ಕೆ.ಸಿ. ವ್ಯಾಲಿ ಯೋಜನೆಯಿಂದ ನಮಗೆ ಕೆಲವೇ ಎಂಎಲ್ಡಿ ನೀರು ಹರಿಯುತ್ತಿದ್ದು, ಹೆಚ್ಚುವರಿಯಾಗಿ ಹತ್ತು ದಿನದಲ್ಲಿ ಹರಿಯಲಿದೆ. ಆಗ ಮಾಲೂರಿನ ಕೆರೆಗಳಿಗೂ ಪಂಪ್‌ ಅಗುತ್ತದೆ. ಇದರ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಮನವಿ ಮಾಡಿದರು.

ಕೆ.ಸಿ.ವ್ಯಾಲಿ ಯೋಜನೆ ನೀರು ಲಕ್ಷ್ಮೀಸಾಗರ ಕೆರೆಗೆ ಪಂಪ್‌ ಆಗಿ, ಕೆರೆಗಳಿಗೆ ರಾಜಕಾಲುವೆ ಮೂಲಕ ಹರಿಯುತ್ತದೆ. ಎರಡೂ ಯೋಜನೆಯ ನೀರು ಕಲುಷಿತಗೊಳ್ಳದಂತೆ ಎಚ್ಚರವಹಿಸಬೇಕು. ಯರಗೋಳ್‌ ಯೋಜನೆಯಲ್ಲಿ ವರ್ಷ ಪೂರ್ತಿ ನೀರು ಲಭ್ಯವಾಗುವುದಿಲ್ಲ. ಎತ್ತಿನಹೊಳೆ ಯೋಜನೆಯಿಂದ ನೀರನ್ನು ಬೈರಗುಂಡ್ಲುಗೆ ಎತ್ತುವಳಿ ಮಾಡಿಕೊಂಡು ಕೆರೆಗಳಿಗೆ ಪೆೈಪ್‌ಲೈನ್‌ ಮೂಲಕ ನೇರವಾಗಿ ಹರಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಎಂಎಲ್ಸಿ ಚೌಡರೆಡ್ಡಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಜಿಪಂ ಸಿಇಒ ಜಗದೀಶ್‌ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next