Advertisement

ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಗೆ 10 ಲಕ್ಷ ರೂ. ಅನುದಾನ

05:51 AM Jan 07, 2019 | |

ಕಲಬುರಗಿ: ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಅಖೀಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಮಹಿಳಾ ಅಭಿವೃದ್ಧಿ ಸಂಸ್ಥೆಗೆ ನಗರದಲ್ಲಿ ಒಂದು ನಿವೇಶನ ಮತ್ತು ಕಟ್ಟಡ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ಒದಗಿಸಲಾಗುವುದು ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ತಿಳಿಸಿದರು.

Advertisement

ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ವೀರಶೈವ ಕಲ್ಯಾಣ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸಂಘದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ತಾವು ಶಾಸಕರಾಗಲು ಹೇಮರೆಡ್ಡಿ ಮಲ್ಲಮ್ಮನ ಕೃಪೆಯೂ ಇದೆ. ಹೇಮರೆಡ್ಡಿ ಮಲ್ಲಮ್ಮ ಹೆಸರಿನಲ್ಲಿ ಮಹಿಳಾ ಸಂಘ ಕಟ್ಟಿಕೊಂಡ ಮಹಿಳಾಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.

ಸ್ವಂತ ಕಟ್ಟಡ ಹೊಂದುವುದು ಸಂಘದ ಮಹದಾಸೆಯಾಗಿದ್ದು, ಈ ನಿಟ್ಟಿನಲ್ಲಿ ತಮ್ಮ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ನಿವೇಶನ ನೀಡುವುದು ಮಾತ್ರವಲ್ಲದೇ ಕಟ್ಟಡ ನಿರ್ಮಿಸಲು 10 ಲಕ್ಷ ರೂ. ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಶರಣಪ್ಪ ಮಟ್ಟೂರು ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಗೆ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ನಿವೇಶನ ನೀಡಿ ಪ್ರೋತ್ಸಾಹಿಸಬೇಕು. ನಿವೇಶನದಲ್ಲಿ ಸಂಸ್ಥೆ ಕಟ್ಟಡ ಕಟ್ಟಲು ತಾವು ಐದು ಲಕ್ಷ ರೂ. ಅನುದಾನ ನೀಡುತ್ತೇವೆ ಎಂದು ಭರವಸೆ ನೀಡಿದರು.

ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪೂರ ಮಾತನಾಡಿ, ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶಗಳು ಸಿಗುತ್ತಿದ್ದು,  ಮಹಿಳೆಯರು ಸಂಕುಚಿತ ಮನೋಭಾವದಿಂದ ಹೊರಬರಬೇಕು. 12ನೇ ಶತಮಾನದಲ್ಲೇ ಬಸಣ್ಣನವರು ಮಹಿಳೆಯರಿಗೆ ಸಮಾನ ಸ್ಥಾನ-ಮಾನ ಒದಗಿಸಲು ಹೋರಾಟ ನಡೆಸಿದ್ದರು. ಇಂದು ಸರ್ಕಾರಗಳು ಪುರುಷರಿಗೆ ಸರಿಸಮಾನ ಅವಕಾಶಗಳನ್ನು ಮಹಿಳೆಯರಿಗೆ ಕಲ್ಪಿಸುತ್ತಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

Advertisement

ಮಾಜಿ ಸಚಿವ ರಾಮಲಿಂಗಾರೆಡ್ಡಿ ಪತ್ನಿ ಚಾಮುಂಡೇಶ್ವರಿ, ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಮಾಜಿ ಸಚಿವ ಡಾ| ಎ.ಬಿ. ಮಾಲಕರೆಡ್ಡಿ, ಸಂಸ್ಥೆಯ ಅಧ್ಯಕ್ಷೆ ಡಾ| ವಿಶಾಲಾಕ್ಷಿ ಕರೆಡ್ಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ| ಶೀತಲ ಪ್ರಶಾಂತ ರಚಿಸಿದ
“ಒಡಲಾಳದ ಮುತ್ತುಗಳು’ ಕವನ ಸಂಕಲನ, ಸಂಸ್ಥೆ ವಾರ್ಷಿಕೋತ್ಸವ ಪ್ರಯುಕ್ತ ಹೊರತಂದ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ಸಂಸ್ಥೆಯ ಜಾಲತಾಣಕ್ಕೆ ಗಣ್ಯರು ಚಾಲನೆ ನೀಡಿದರು.

ಯಾದಗಿರಿಯ ಹೆಡಗಿಮದ್ರಿಯ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಬಸವರಾಜ ಇಟಗಿ, ಹೇಮರೆಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚನ್ನಾರೆಡ್ಡಿ ಆರ್‌.ಪಾಟೀಲ, ಬೀದರ್‌ನ ಕಿತ್ತೂರು ರಾಣಿ ಚನ್ನಮ್ಮ ಮಹಿಳಾ ಮಂಡಳದ ಅಧ್ಯಕ್ಷೆ ಗುರಮ್ಮ ಸಿದ್ದಾರೆಡ್ಡಿ, ರೆಡ್ಡಿ ಸಮಾಜದ ಅಧ್ಯಕ್ಷ ಚನ್ನಾರೆಡ್ಡಿ ಪಾಟೀಲ,
ಮುಖಂಡರಾದ ಬಸವರೆಡ್ಡಿ ಇಟಗಿ, ನಾಗರೆಡ್ಡಿ ಪಾಟೀಲ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next