ಭೋಪಾಲ್(ಮಧ್ಯಪ್ರದೇಶ): ಆರೋಗ್ಯ ಇಲಾಖೆಯ ನಿವೃತ್ತ ಉದ್ಯೋಗಿ ಸ್ಟೋರ್ ಕೀಪರ್ ಮನೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅಪಾರ ಪ್ರಮಾಣದ ನಗದು ಮತ್ತು ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ.
ಇದನ್ನೂ ಓದಿ:Donating Kidney: ಕಿಡ್ನಿ ದಾನ ಮಾಡಿ ಸೊಸೆಯ ಜೀವ ಉಳಿಸಿದ 70 ವರ್ಷದ ಅತ್ತೆ
ಲೋಕಾಯುಕ್ತ ಎಸ್ಪಿ ಹೇಳಿಕೆಯ ಪ್ರಕಾರ, ಆರೋಗ್ಯ ಇಲಾಖೆಯ ಸ್ಟೋರ್ ಕೀಪರ್ ಆಗಿದ್ದ ಅಶ್ಫಾಕ್ ಅಲಿಗೆ ತಿಂಗಳಿಗೆ ಅಂದಾಜು 45,000 ಸಾವಿರ ರೂಪಾಯಿ ಸಂಬಳ ದೊರಕುತ್ತಿತ್ತು. ಕೆಲಸದಿಂದ ನಿವೃತ್ತಿಯಾಗಿರುವ ಅಲಿ ನಿವಾಸದ ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ ನಡೆಸಿದ ವೇಳೆ 50 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು 20 ಲಕ್ಷ ರೂಪಾಯಿ ನಗದು ದೊರಕಿದೆ ಎಂದು ವರದಿ ತಿಳಿಸಿದೆ.
ಭೋಪಾಲ್ ನಲ್ಲಿರುವ ಅಶ್ಫಾಕ್ ಅಲಿ ನಿವಾಸದಲ್ಲಿ ಅತ್ಯಾಧುನಿಕ ಅಡುಗೆ ಮನೆ, ಲಕ್ಷಾಂತರ ರೂಪಾಯಿ ಮೌಲ್ಯದ ಸೋಫಾ ಸೆಟ್ ಗಳು, ಶೋಕೇಸ್ , ರೆಫ್ರಿಜರೇಟರ್ ಮತ್ತು ಟೆಲಿವಿಷನ್ ಇದ್ದಿರುವುದಾಗಿ ವರದಿ ವಿವರಿಸಿದೆ.
ಭೋಪಾಲ್ ನ ರಾಜ್ ಗಢದ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟೋರ್ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದ ಅಶ್ಫಾಕ್ ಅಲಿ ಬೇನಾಮಿಯಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದಿಸಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಭೋಪಾಲ್ ನ ವಿವಿಧ ಸ್ಥಳಗಳಲ್ಲಿ ಲೋಕಾಯುಕ್ತ ಅಲಿಯ ಅಕ್ರಮ ಆಸ್ತಿಯ ಪತ್ತೆಗಾಗಿ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಈವರೆಗೆ ದೊರಕಿರುವ ದಾಖಲೆಗಳ ಪ್ರಕಾರ ಅಲಿ ಒಟ್ಟು 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಂದಾಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಅಲಿ, ಆತನ ಪತ್ನಿ ಹಾಗೂ ಮಗಳ ಹೆಸರಿನಲ್ಲಿ ಸುಮಾರು 16 ಸ್ಥಿರಾಸ್ತಿಗಳಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿದೆ. ಇದನ್ನೂ ಹೊರತುಪಡಿಸಿ ನಾಲ್ಕು ಕಟ್ಟಡಗಳು ಹಾಗೂ ನಿರ್ಮಾಣ ಹಂತದಲ್ಲಿರುವ 14 ಸಾವಿರ ಚದರ ಅಡಿ ವಿಸ್ತೀರ್ಣದ ವಾಣಿಜ್ಯ ಸಂಕೀರ್ಣದ ಬಗ್ಗೆ ಮಾಹಿತಿ ಲಭಿಸಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.